ತಿರುವನಂತಪುರಂ: ಖ್ಯಾತ ನಿರ್ಮಾಪಕ, ನಿರ್ದೇಶಕ ರಂಜಿತ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದೆ. ಯುವ ನಟನೊಬ್ಬನನ್ನು ಬೆಂಗಳೂರಿನ ಹೋಟೆಲ್ ಗೆ ಕರೆಸಿ ಲೈಂಗಿಕ ದೌರ್ಜನ್ಯವೆಸಗಿದ್ದಾಗಿ ದೂರು ದಾಖಲಾಗಿದೆ.
ಬಂಗಾಳಿ ನಟಿ ಶ್ರೀಲೇಖಾ ಮಿತ್ರ ನಿರ್ಮಾಪಕ ರಂಜಿತ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ಈ ಕುರಿತು ತನಿಖೆ ನಡೆಯುತ್ತಿರುವಾಗಲೇ ಮತ್ತೊಂದು ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ನಿರ್ಮಾಪಕ ರಂಜಿತ್ ಯುವ ನಟನ ಮೇಲೆಯೇ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಬಗ್ಗೆ ನಟರೊಬ್ಬರು ರಂಜಿತ್ ವಿರುದ್ಧ ಡಿಜಿಪಿಗೆ ದೂರು ನೀಡಿದ್ದಾರೆ. ಸಿನಿಮಾದ ಆಡಿಷನ್ ವಿಚಾರವಾಗಿ 2012ರಲ್ಲಿ ಬೆಂಗಳೂರಿನ ಹೋಟೆಲ್ ಗೆ ಕರೆಸಿಕೊಂಡ ನಿರ್ಮಾಪಕ ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಇದು ಆಡಿಷನ್ ಪ್ರಕ್ರಿಯೆಯ ಒಂದು ಭಾಗ ಎಂದು ಭಾವಿಸಿದ್ದೆ. ಬದಲಾಗಿ ಪಾತ್ರ ನೀಡೋದಾಗಿ ಭರವಸೆಯನ್ನೂ ನೀಡಿದ್ದರು. ಬಟ್ಟೆ ಬಿಚ್ಚಿಸಿ ಹಲ್ಲೆಯನ್ನೂ ನಡೆಸಿದ್ದರು. ಈ ಘಟನೆ ಬಳಿಕ ರಂಜಿತ್ ಮಾರನೇ ದಿನ ಬೆಳಿಗ್ಗೆ ಹಣ ನೀಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ದೂರನ್ನು ಎಸ್ ಐಟಿ ಪರಿಶೀಲನೆ ನಡೆಸಿದ್ದು, ತನಿಖೆ ನಡೆಸಲಿದೆ ಎಂದು ಕೇರಳ ಪೊಲೀಸರು ತಿಳಿಸಿದ್ದಾರೆ.
ನ್ಯಾ.ಹೇಮಾ ವರದಿ ಮಲಯಾಳಂ ಚಿತ್ರರಂಗದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿ ಮಾಡೊದ್ದು, ಖ್ಯಾತ ನಟರು, ನಿರ್ದೇಶಕರು, ನಿರ್ಮಾಕರ ವಿರುದ್ಧ ಲೈಂಗಿಕ ದೌರ್ಜನ್ಯ ದೂರು ದಾಖಲಾಗಿದ್ದು, ಪ್ರಕರಣಗಳ ಬಗ್ಗೆ ವಿಶೇಷ ತನಿಖಾ ತಂದದಿಂದ ತನಿಖೆ ನಡೆದಿದೆ.