ಅಪ್ರಾಪ್ತ ಅತ್ಯಾಚಾರ ಸಂತ್ರಸ್ತೆಯೊಬ್ಬರು ಗರ್ಭಪಾತಗೊಳಿಸಲು ಅನುಮತಿ ನೀಡುವಂತೆ ಕೋರಿ ಸಲ್ಲಿಸಿದ್ದ ಮನವಿಯ ವಿಚಾರಣೆಯ ವೇಳೆ ಮನುಸ್ಮೃತಿಯನ್ನು ಓದುವಂತೆ ಸಲಹೆ ನೀಡಿದ ಎಂಟು ದಿನಗಳ ನಂತರ ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ ಸಮೀರ್ ದವೆ ಗುರುವಾರ ಅತ್ಯಾಚಾರ ಆರೋಪಿಯನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸೂಚಿಸಿರುವ ಘಟನೆ ನಡೆದಿದೆ.
ಅಪ್ರಾಪ್ತ ಬಾಲಕಿಯ ಗರ್ಭಧಾರಣೆ ಪ್ರಕರಣ ಇದಾಗಿದೆ. ಗರ್ಭಪಾತಕ್ಕೆ ನ್ಯಾಯಾಲಯವು ಅನುಮತಿಸದಿದ್ದಲ್ಲಿ ಮಗುವನ್ನು ಉಳಿಸಿಕೊಳ್ಳಲು ಕುಟುಂಬವು ಸಿದ್ಧರಿಲ್ಲ ಎಂದು ವಕೀಲರು ಹೇಳಿದರು. ಹಲವರು ಮಗುವನ್ನು ದತ್ತು ಪಡೆದುಕೊಳ್ಳಲು ರೆಡಿ ಇದ್ದರೂ ಮಗುವನ್ನು ಇಟ್ಟುಕೊಳ್ಳಲು ಕುಟುಂಬಸ್ಥರು ಒಪ್ಪುವುದಿಲ್ಲ ಎಂದರು. ಆದ್ದರಿಂದ 27 ವಾರಗಳ ಗರ್ಭಾವಸ್ಥೆಯನ್ನು ಮುಕ್ತಾಯಗೊಳಿಸಲು ಇದಾಗಲೇ ದೆಹಲಿ ಹೈಕೋರ್ಟ್ ನೀಡಿರುವ ತೀರ್ಪಿನಂತೆಯೇ ಇದರಲ್ಲಿಯೂ ನೀಡಿ ಎಂದರು.
ಆಗ ನ್ಯಾಯಮೂರ್ತಿ ಅವರು ಆರೋಪಿ ಎಲ್ಲಿದ್ದಾನೆ ಎಂದಾಗ ವಕೀಲರು ಜೈಲಿನಲ್ಲಿ ಎಂದರು. ಆದರೆ ನ್ಯಾಯಮೂರ್ತಿಗಳು “ರಾಜಿ ಮಾಡಿಕೊಳ್ಳಲು ಏನಾದರೂ ಅವಕಾಶವಿದೆಯೇ?” ಎಂದು ಪ್ರಶ್ನಿಸಿದರು. ಬಾಲಕಿಯ ಹಿತದೃಷ್ಟಿಯನ್ನು ಗಮನದಲ್ಲಿ ಇಟ್ಟುಕೊಂಡು ಆರೋಪಿಯನ್ನು ಕೋರ್ಟ್‌ಗೆ ಕರೆಸಿ. ಆತ ರಾಜಿ ಮಾಡಿಕೊಳ್ಳುವ ಸಾಧ್ಯತೆಗಳ ಬಗ್ಗೆ ಪರಿಶೀಲಿಸೋಣ ಎಂದ ನ್ಯಾಯಮೂರ್ತಿಗಳು ವಿಚಾರಣೆಯನ್ನು ಮುಂದೂಡಿದರು.