
ಲಸಿಕೆ ಫ್ರೀಜರ್ ಮಾಡುವ ಸ್ಥಳದಲ್ಲಿ ಬಿಯರ್ ಬಾಟಲಿ ಇಟ್ಟಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಉತ್ತರ ಪ್ರದೇಶ ಜಿಲ್ಲೆಯ ಖುರ್ಜಾ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಘಟನೆ ನಡೆದಿದೆ. ಲಸಿಕೆ ಫ್ರೀಜರ್‌ನಲ್ಲಿ ಬಿಯರ್ ಕ್ಯಾನ್ ಹಾಗೂ ನೀರಿನ ಬಾಟಲಿ ಇಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ವೈರಲ್ ಆಗ್ತಿದ್ದಂತೆ ಸೂಕ್ತ ಕ್ರಮಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಮುಖ್ಯ ವೈದ್ಯಾಧಿಕಾರಿ ವಿನಯ್ ಕುಮಾರ್ ಸಿಂಗ್, ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ. ನಿಯಮದಂತೆ, ಫ್ರೀಜರ್‌ನಲ್ಲಿ ಲಸಿಕೆಗಳನ್ನು ಹೊರತುಪಡಿಸಿ ಬೇರೆ ಯಾವುದೇ ವಸ್ತುವನ್ನು ಇಡಬಾರದು. ಫ್ರೀಜರ್‌ನಲ್ಲಿ ಬಿಯರ್ ಕ್ಯಾನ್ ಮತ್ತು ನೀರಿನ ಬಾಟಲಿಗಳನ್ನು ಸಂಗ್ರಹಿಸುವುದು ಗಂಭೀರ ವಿಷಯವಾಗಿದೆ ಎಂದವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ತನಿಖೆ ನಡೆಸಲು ಆದೇಶ ಹೊರಡಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಂಗ್ ಭರವಸೆ ನೀಡಿದ್ದಾರೆ.