ಮೈಸೂರು: ಆಗಸ್ಟ್ 23 ರಂದು ಮೈಸೂರಿನಲ್ಲಿ ನಡೆದಿದ್ದ ದರೋಡೆ, ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ವಿವಿಧ ರಾಜ್ಯಗಳಲ್ಲಿ ಬಂಧಿಸಲಾಗಿದೆ ಎಂದು ಡಿಜಿ ಐಜಿಪಿ ಪ್ರವೀಣ್ ಸೂದ್ ತಿಳಿಸಿದ್ದಾರೆ
ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದರೋಡೆ ಕೇಸ್ ನಲ್ಲಿ ಪಶ್ಚಿಮ ಬಂಗಾಳ, ಉತ್ತರಪ್ರದೇಶ, ಮುಂಬೈ, ಜಮ್ಮು-ಕಾಶ್ಮೀರ, ರಾಜಸ್ಥಾನ, ಬೆಂಗಳೂರಿನಲ್ಲಿದ್ದ ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.
ನಮ್ಮ ಪೊಲೀಸರು ಆಯಾ ರಾಜ್ಯಗಳಿಗೆ ತೆರಳಿ ಬಂಧಿಸಿದ್ದಾರೆ. ಕೋರ್ಟ್ ಪ್ರಸೀಜರ್ ಪ್ರಕಾರ ಅಲ್ಲಿಂದ ಅವರನ್ನು ಕರೆತರಬೇಕಿದೆ. ಮೈಸೂರಿನ ಒಬ್ಬರು ಸೇರಿ ಇಬ್ಬರಿಂದ ದರೋಡೆಗೆ ಸಂಚು ರೂಪಿಸಲಾಗಿತ್ತು. ಸಂಚುಕೋರ ಕೂಡ ಚಿನ್ನಾಭರಣ ಅಂಗಡಿ ಇಟ್ಟುಕೊಂಡಿದ್ದವರು. ದರೋಡೆಗೆ ಹೊರಗಿನಿಂದ ಜನರನ್ನು ಕರೆಸಿ ಕೃತ್ಯವೆಸಗಿದ್ದಾರೆ.
ಮೈಸೂರು ಪೊಲೀಸ್ ಆಯುಕ್ತರ ತಂಡ ಶ್ರಮವಹಿಸಿ ಆರೋಪಿಗಳನ್ನು ಹಿಡಿದಿದ್ದು, 8 – 10 ರಾಜ್ಯಗಳಿಗೆ ತಿರುಗಾಡಿದ್ದಾರೆ. ಪೊಲೀಸರು ಉತ್ತಮ ಕೆಲಸ ಮಾಡಿದ್ದು, ಭದ್ರತೆ ದೃಷ್ಟಿಯಿಂದ ಎಲ್ಲ ವಿಚಾರ ಬಹಿರಂಗಗೊಳಿಸುವುದಿಲ್ಲ ಎಂದು ಹೇಳಿದ್ದಾರೆ.
5 ಲಕ್ಷ ರೂ. ಬಹುಮಾನ:
ಮೈಸೂರಿನಲ್ಲಿ ನಡೆದ ದರೋಡೆ ಮತ್ತು ಶೂಟೌಟ್ ಪ್ರಕರಣ ಭೇದಿಸಿದ ಮೈಸೂರು ಪೊಲೀಸರಿಗೆ 5 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಆರೋಪಿಗಳ ಸುಳಿವು ನೀಡಿದವರಿಗೆ 5 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಯಾರೊಬ್ಬರೂ ಸುಳಿವು ನೀಡಿರಲಿಲ್ಲ. ನಮ್ಮ ಪೊಲೀಸರು ಪ್ರಕರಣ ಭೇದಿಸಿದ್ದಾರೆ. ಹಾಗಾಗಿ ಮೊದಲೇ ಹೇಳಿದಂತೆ ಪ್ರಕರಣ ಭೇದಿಸಿದ ಪೊಲೀಸರಿಗೆ ಬಹುಮಾನ ನೀಡಲಾಗುವುದು ಎಂದು ತಿಳಿಸಿದ್ದಾರೆ.