ಕಲಬುರಗಿ : ಇತ್ತೀಚೆಗೆ ಅಕ್ರಮ ಮರಳು ತಪಾಸಣೆ ಸಂದರ್ಭದಲ್ಲಿ ಟ್ರಾಕ್ಟರ್ ಗೆ ಸಿಲುಕಿ ಸಾವನಪ್ಪಿದ ಜೇವರ್ಗಿ ತಾಲೂಕಿನ ನೆಲೋಗಿ ಪೊಲೀಸ್ ಠಾಣೆಯ ಮುಖ್ಯ ಪೇದೆ ಮಯೂರ್ ಚವ್ಹಾಣ ಅವರ ಚೌಡಾಪೂರ್ ತಾಂಡಾ ನಿವಾಸಕ್ಕೆ ಮಂಗಳವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಸ್ಥಳೀಯ ಶಾಸಕ ಎಂ.ವೈ.ಪಾಟೀಲ ಜೊತೆ ಸೇರಿ ತಮ್ಮ ಪಕ್ಷದ ವತಿಯಿಂದ 1 ಲಕ್ಷ ರೂ. ಚೆಕ್ ಮೃತ ಮಯೂರ್ ಚವ್ಹಾಣ ಅವರ ಪತ್ನಿ ನಿರ್ಮಲಾ ಅವರಿಗೆ ವಿತರಿಸಿದರು.ಸರ್ಕಾರದಿಂದ ಸಿಗಬೇಕಾದ ಎಲ್ಲಾ ಸೌಲಭ್ಯ ಕಲ್ಪಿಸಲಾಗುವುದು. ಧೈರ್ಯದಿಂದಿರಿ, ಆತ್ಮ ವಿಶ್ವಾಸ ಕಳೆದುಕೊಳ್ಳಬೇಡಿ. ಸರ್ಕಾರ ನಿಮ್ಮೊಂದಿಗಿದೆ ಎಂದು ಕುಟುಂಬಸ್ಥರಿಗೆ ಸಚಿವರು ಮತ್ತು ಶಾಸಕರು ಸಾಂತ್ವನ ನುಡಿಗಳನ್ನಾಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಮೃತ ಮಯೂರ್ ಚವ್ಹಾಣ ಕುಟುಂಬಕ್ಕೆ ಪೊಲೀಸ್ ಇಲಾಖೆಯಿಂದ 30 ಲಕ್ಷ ರೂ. ಪರಿಹಾರ ನೀಡಲಾಗುವುದು. ಜೊತೆಗೆ ಸೇವಾ ವಿಮೆ, ಗ್ರಾಜುಟಿ ಸೇರಿದಂತೆ ಇತರೆ 10 ಲಕ್ಷ ರೂ. ಕುಟುಂಬಕ್ಕೆ ಸಿಗಲಿದೆ. ಸರ್ಕಾರದ ನಿಯಮಾವಳಿಯಂತೆ ಕುಟುಂಬದ ಓರ್ವ ಸದಸ್ಯರಿಗೆ ಸರ್ಕಾರಿ ನೌಕರಿ ನೀಡಲಾಗುವುದು. ಮಕ್ಕಳ ವಿಧ್ಯಾಬ್ಯಾಸದ ಬಗ್ಗೆಯೂ ಸರ್ಕಾರ ಗಮನಹರಿಸಲಿದೆ ಎಂದರು.
ಮರಳು ಮಾಫಿಯಾಗೆ ಕಡಿವಾಣ
ಜಿಲ್ಲೆಯಲ್ಲಿ ಅಕ್ರಮ ಮರಳು ಮಾಫಿಯಾಗೆ ಕಡಿವಾಣ ಹಾಕಲಾಗುವುದು. ನಮ್ಮ ಸರ್ಕಾರ ಬಂದು 1 ತಿಂಗಳಾಗಿದೆ. ಜಿಲ್ಲೆಯಲ್ಲಿನ ಅಕ್ರಮ ಮರಳುಗಾರಿಕೆ, ಗಣಿಗಾರಿಕೆ, ಜೂಜು ಅಡ್ಡೆ ತಡೆಯಲು ಈಗಾಗಲೆ ಹೆಜ್ಜೆ ಇಟ್ಟಿದ್ದೇವೆ. ಈ ಪ್ರಕರಣ ಸ್ಟಾಕ್ ಯಾರ್ಡ್ ನಿಂದ ಮರಳು ತರುವಾಗ ಘಟಿಸಿದೆ. ಇದರಲ್ಲಿ ಯಾರೇ ತಪ್ಪಿತಸ್ಥರಿದ್ದರು ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು. ಶಾಸಕರಾದ ಎಂ.ವೈ.ಪಾಟೀಲ, ಎಸ್.ಪಿ. ಇಶಾ ಪಂತ್, ತಹಶೀಲ್ದಾರ ಸಂಜೀವಕುಮಾರ ದಾಸರ್ ಮತ್ತಿತರು ಇದ್ದರು.