
ಭಾರತೀಯ ಚಲನಚಿತ್ರೋದ್ಯಮವನ್ನು ವಿಶ್ವದ ಶ್ರೀಮಂತ ಉದ್ಯಮವೆಂದು ಪರಿಗಣಿಸಲಾಗಿದೆ. ಇಲ್ಲಿ ಜನಪ್ರಿಯ ನಟ-ನಟಿಯರೆಲ್ಲ ಒಂದೊಂದು ಸಿನೆಮಾಕ್ಕೆ ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ. ವಿಶ್ವದ ಶ್ರೀಮಂತ ನಟರ ಪಟ್ಟಿಯಲ್ಲಿ ಶಾರುಖ್ ಖಾನ್ ಕೂಡ ಸೇರಿದ್ದಾರೆ. ಆದರೆ ಲೀಡಿಂಗ್ ಲೇಡಿಸ್ ಅಂದರೆ ಹೀರೋಯಿನ್‌ಗಳ ವಿಷಯಕ್ಕೆ ಬಂದರೆ ಬೇರೆ ದೇಶಗಳ ನಟಿಯರೇ ಅಗ್ರಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ.
ಏಷ್ಯಾದ ಶ್ರೀಮಂತ ನಟಿ ಎಂಬ ಹೆಗ್ಗಳಿಕೆ ಭಾರತೀಯರಿಗೆ ಸಿಕ್ಕಿಲ್ಲ. ಪ್ರಿಯಾಂಕಾ ಚೋಪ್ರಾ , ದೀಪಿಕಾ ಪಡುಕೋಣೆ, ಐಶ್ವರ್ಯ ರೈ ಬಚ್ಚನ್ ಇವರನ್ನೆಲ್ಲ ಹಿಂದಿಕ್ಕಿ ಏಷ್ಯಾದ ಅತ್ಯಂತ ಸಿರಿವಂತ ನಟಿ ಎನಿಸಿಕೊಂಡಿದ್ದಾರೆ ಚೀನಾದ ಫ್ಯಾನ್ ಬಿಂಗ್‌ಬಿಂಗ್. ಚೀನಾದ ಈ ನಟಿ ಏಷ್ಯಾದಲ್ಲೇ ಅತ್ಯಂತ ಸಿರಿವಂತೆ. ಫ್ಯಾನ್ ಬಿಂಗ್‌ಬಿಂಗ್ ಏಷ್ಯಾದಲ್ಲಿ ಮಾತ್ರವಲ್ಲದೆ ವಿಶ್ವದ ಅತ್ಯಂತ ಜನಪ್ರಿಯ ಮತ್ತು ಯಶಸ್ವಿ ನಟಿಯರಲ್ಲಿ ಒಬ್ಬರು. ಈ ನಟಿಯ ನಿವ್ವಳ ಆಸ್ತಿ ಮೌಲ್ಯ 100-110 ಮಿಲಿಯನ್ ಡಾಲರ್ ಅಂದರೆ 820-900 ಕೋಟಿ ರೂಪಾಯಿ.
ಚೀನೀ ಚಲನಚಿತ್ರೋದ್ಯಮದಲ್ಲಿ ಹಲವು ವರ್ಷಗಳಿಂದ ಪ್ರಮುಖ ನಟಿಯಾಗಿ ಕೆಲಸ ಮಾಡುತ್ತಿರುವ ಫ್ಯಾನ್ ಬಿಂಗ್ಬಿಂಗ್, ಕೊರಿಯನ್ ಚಲನಚಿತ್ರೋದ್ಯಮದಲ್ಲಿಯೂ ಅನೇಕರನ್ನು ಹಿಂದಿಕ್ಕಿದ್ದಾರೆ. ವರದಿಗಳ ಪ್ರಕಾರ ಭಾರತದ ಶ್ರೀಮಂತ ನಟಿ ಎನಿಸಿಕೊಂಡಿರೋ ಐಶ್ವರ್ಯಾ ರೈ ಬಚ್ಚನ್ ಅವರ ನಿವ್ವಳ ಆಸ್ತಿ ಮೌಲ್ಯ 800 ಕೋಟಿ ರೂಪಾಯಿ. 2018 ರಲ್ಲಿ ತೆರಿಗೆ ವಿಚಾರಕ್ಕೆ ಚೀನಾದ ಈ ನಟಿ ಸುದ್ದಿ ಮಾಡಿದ್ದರು.
ಫ್ಯಾನ್ ಬಿಂಗ್‌ಬಿಂಗ್ ಚೀನಾ ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಿದ್ದರಂತೆ. ಈ ಕಾರಣಕ್ಕೆ ನಟಿಗೆ ಸುಮಾರು 1000 ಕೋಟಿ ರೂಪಾಯಿ ದಂಡ ವಿಧಿಸಲಾಗಿತ್ತು. ಫ್ಯಾನ್ ಬಿಂಗ್‌ಬಿಂಗ್ ಹದಿಹರೆಯದಲ್ಲೇ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ಕೇವಲ 16 ನೇ ವಯಸ್ಸಿನಲ್ಲಿ ಟಿವಿ ಶೋ ಮೈ ಫೇರ್ ಪ್ರಿನ್ಸೆಸ್ ಮೂಲಕ ದೊಡ್ಡ ಬ್ರೇಕ್ ಪಡೆದರು.