ಕಲಬುರಗಿ: ಸಾವಿರಕ್ಕೂ ಹೆಚ್ಚು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಇಂಥವರ ಪರ ಮೋದಿ ಮತಯಾಚಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ಕಲಬುರಗಿ ಜಿಲ್ಲೆ ಸೇಡಂ ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಬಗ್ಗೆ ಪ್ರಸ್ತಾಪಿಸಿ ಮಹಿಳೆಯರ ಮೇಲೆ ಅತ್ಯಾಚಾರ ನಡೆದಿದೆ. ಇದಕ್ಕೆ ಮೋದಿ ಅವರು ಏನು ಹೇಳುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕದಲ್ಲಿ ರಾಕ್ಷಸೀಯ ಕೃತ್ಯ ನಡೆದಿದ್ದರೂ ಈ ಬಗ್ಗೆ ಮೋದಿ ಮಾತನಾಡುವುದಿಲ್ಲ. ಒಬ್ಬ ರಾಕ್ಷಸ ದೇಶ ಬಿಟ್ಟು ಓಡಿಹೋಗುವಾಗ ಇವರಿಗೆ ಗೊತ್ತೇ ಇರಲಿಲ್ಲವೇ? ನನ್ನ ಮಗಳನ್ನು ಭೇಟಿಯಾಗಲು ಹೋದರೆ ವಿದೇಶಕ್ಕೆ ಹೋಗಿದ್ದಾರೆ ಎನ್ನುತ್ತಾರೆ. ಬೇರೆಯವರು ದೇಶ ಬಿಟ್ಟು ಹೋದರೆ ಅವರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಾರೆ. ಅತ್ಯಾಚಾರವೆಸಗಿದ ವ್ಯಕ್ತಿ ದೇಶ ಬಿಟ್ಟು ಹೋದಾಗ ಮೋದಿ ಏನು ಮಾಡುತ್ತಿದ್ದರು? ಇಂಟರ್ ಪೋಲ್ ನವರು ಏನು ಮಾಡುತ್ತಿದ್ದರು ಎಂದು ಸಂಸದ ಪ್ರಜ್ವಲ್ ರೇವಣ್ಣ ಹೆಸರು ಹೇಳದೆ ಪ್ರಿಯಾಂಕಾ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಂಗಳಸೂತ್ರ ಕಸಿಯುತ್ತಾರೆ ಎಂದು ಮೋದಿ ಹೇಳುತ್ತಾರೆ. ಒಲಿಂಪಿಕ್ಸ್ ಮೆಡಲಿಸ್ಟ್ ಗಳ ಮೇಲೆ ಅತ್ಯಾಚಾರವಾದಾಗ ಇವರು ಎಲ್ಲಿದ್ದರು ಎಂದು ಪ್ರಶ್ನಿಸಿದ್ದಾರೆ.
ಪ್ರಧಾನಿ ಮೋದಿ ಬರಿ ಸುಳ್ಳು ಹೇಳುತ್ತಾರೆ. ನಿರುದ್ಯೋಗ ತಾಂಡವವಾಡುತ್ತಿದೆ. ಯುವಕರು ವಲಸೆ ಹೋಗುತ್ತಿದ್ದಾರೆ. 10 ವರ್ಷದಿಂದಲೂ ಹೊಸ ಉದ್ಯೋಗ ಸೃಷ್ಟಿಸಲು ಕ್ರಮ ಕೈಗೊಂಡಿಲ್ಲ. ನೋಟ್ ಬ್ಯಾನ್, ಜಿಎಸ್‌ಟಿಯಿಂದಾಗಿ ಜನ ಸಾಕಷ್ಟು ನೊಂದಿದ್ದಾರೆ. ಖಾಲಿ ಹುದ್ದೆಗಳ ಬರ್ತಿಗೆ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಉದ್ಯಮಿಗಳ ಲಕ್ಷಾಂತರ ರೂಪಾಯಿ ಸಾಲವನ್ನು ಮನ್ನಾ ಮಾಡಲಾಗಿದೆ. ಆದರೆ, ಕೇಂದ್ರ ಸರ್ಕಾರ ರೈತರ ಒಂದು ರೂಪಾಯಿ ಸಾಲ ಮನ್ನಾ ಮಾಡಿಲ್ಲ. ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದರೆ ಎಂ.ಎಸ್.ಪಿ. ನಿಯಮ ಜಾರಿಗೊಳಿಸಲಾಗುವುದು ಎಂದರು.
ಭಾರತದ ಮೊದಲ ಅಹಂಕಾರಿ ಪ್ರಧಾನಿ ನರೇಂದ್ರ ಮೋದಿ. ಬಿಜೆಪಿಯವರು ಸಂವಿಧಾನ ಬದಲಾವಣೆಗೆ ಪ್ರಯತ್ನಿಸಿದ್ದಾರೆ. ಯಾವುದೇ ಕಾರಣಕ್ಕೂ ಎನ್.ಡಿ.ಎ. ಅಭ್ಯರ್ಥಿಗಳಿಗೆ ಮತ ನೀಡಬೇಡಿ. ಪೆಟ್ರೋಲ್, ಡೀಸೆಲ್, ಗ್ಯಾಸ್ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಬಡವರು ಜೀವನ ನಡೆಸಲು ಸಾಕಷ್ಟು ತೊಂದರೆಯಾಗಿದೆ. ಕೇಂದ್ರದಲ್ಲಿರುವ ಮೋದಿ ಸರ್ಕಾರ ಬಡವರ ಪರ ಸರ್ಕಾರವಲ್ಲ, ಉದ್ಯಮಿಗಳು ಶ್ರೀಮಂತರ ಪರ ಸರ್ಕಾರವೆಂದು ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.