ಬೆಳಗಾವಿ: ವಿಧಾನಸಭೆ ಚುನಾವಣೆಯಲ್ಲಿ ಹಲವು ಗ್ಯಾರಂಟಿ ಯೋಜನೆಗಳ ಜಾರಿ ಭರವಸೆ ನೀಡಿರುವ ಕಾಂಗ್ರೆಸ್ ಅಸಂಘಟಿತ ವಲಯದ ಮಹಿಳೆಯರ ವೇತನ ಹೆಚ್ಚಳ ಭರವಸೆ ನೀಡಿದೆ.
ಗೃಹಲಕ್ಷ್ಮಿ, ಗೃಹಜೋತಿ, ಅನ್ನ ಭಾಗ್ಯ, ಯುವ ನೀತಿ ಮತ್ತು ಎಲ್ಲಾ ಮಹಿಳೆಯರಿಗೆ ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವುದಾಗಿ ಹೇಳಿರುವ ಕಾಂಗ್ರೆಸ್ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ 15 ಸಾವಿರ ರೂ., ಸಹಾಯಕಿಯರಿಗೆ 10,000 ರೂ., ಆಶಾ ಕಾರ್ಯಕರ್ತೆಯರಿಗೆ 8000 ರೂ., ಬಿಸಿಯೂಟ ಸಿಬ್ಬಂದಿಗೆ 5 ಸಾವಿರ ರೂ ನೀಡುವುದಾಗಿ ಭರವಸೆ ನೀಡಲಾಗಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾಕ ಗಾಂಧಿ ಈ ಬಗ್ಗೆ ಘೋಷಣೆ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಪ್ರಿಯಾಂಕಾ ಗಾಂಧಿ ಅವರು, ಅಂಗನವಾಡಿ ಕಾರ್ಯಕರ್ತರ ಗೌರವಧನ 7,000 ರೂ., ಸಹಾಯಕಿಯರ ಗೌರವದನ 4000 ರೂ., ಆಶಾ ಕಾರ್ಯಕರ್ತೆಯರು ಹಾಗೂ ಬಿಸಿಯೂಟ ಕಾರ್ಯಕರ್ತೆಯರ ಗೌರವಧನವನ್ನು 2000 ರೂ. ಹೆಚ್ಚಳ ಮಾಡುವುದಾಗಿ ತಿಳಿಸಿದ್ದಾರೆ. ಅಂಗನವಾಡಿಯವರಿಗೆ 3 ಲಕ್ಷ ರೂ. ಹಾಗೂ ಉಳಿದವರಿಗೆ 2 ಲಕ್ಷ ರೂ. ನಿವೃತ್ತಿ ಧನ ನೀಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ.