ಬೆಂಗಳೂರು: ಯತೀಂದ್ರ ಸಿದ್ದರಾಮಯ್ಯ ವಿಡಿಯೋ ವೈರಲ್ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ವರ್ಗಾವಣೆಗೆ ಶಿಫಾರಸು ಮಾಡಿದರೆ ತಪ್ಪೇನು? ಎಂದು ಪ್ರಶ್ನಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಹೆಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗ ಹೆಚ್.ಡಿ.ಕುಮಾರಸ್ವಾಮಿ ಶಿಫಾರಸು ಮಾಡುತ್ತಿರಲಿಲ್ಲವೇ? ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ನಿಖಿಲ್ ಶಿಫಾರಸು ಮಾಡುತ್ತಿರಲಿಲ್ಲವೇ? ಯತೀಂದ್ರ ಓರ್ವ ಮಾಜಿ ಶಾಸಕನಾಗಿ ಅವರ ಜವಾಬ್ದಾರಿ ನಿಭಾಯಿಸಿದ್ದಾರೆ ಎಂದು ಹೇಳಿದ್ದಾರೆ.
ಹೆಚ್.ಡಿ.ಕುಮಾರಸ್ವಾಮಿ ತಾವು ಕರೆಂಟ್ ಕದ್ದ ವಿಚಾರವನ್ನು ಡೈವರ್ಟ್ ಮಾಡಲು ಈಗ ಸಿಎಂ ಹಾಗೂ ಅವರ ಪುತ್ರನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಈ ರೀತಿ ಆರೋಪ ಮಾಡುವ ಬಗ್ಗೆ ಗಮನ ಕೊಡುವ ಬದಲು ಕುಮಾರಸ್ವಾಮಿಯವರು ಗಮನವನ್ನು ತಮ್ಮ ಶಾಸಕರ ಬಗ್ಗೆ ಕೊಡಲಿ ಕಡೇ ಪಕ್ಷ ಅವರ ಶಾಸಕರಾದರೂ ಜೆಡಿಎಸ್ ನಲ್ಲಿ ಉಳಿದುಕೊಳ್ಳುತ್ತಾರೆ ಎಂದು ಟಾಂಗ್ ನೀಡಿದ್ದಾರೆ.
ಇದೇ ವೇಳೆ ವಿಪಕ್ಷ ನಾಯಕರಾಗಿ ಆರ್.ಅಶೋಕ್ ನೇಮಕ ವಿಚಾರವಾಗಿ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಬಿಜೆಪಿಯವರು 6 ತಿಂಗಳ ಬಳಿಕ ಪ್ರಜಾಪ್ರಭುತ್ವಕ್ಕೆ ಗೌರವ ತಂದಿದ್ದಾರೆ. ವಿಪಕ್ಷ ನಾಯಕನ ಆಯ್ಕೆ ಕಾಂಗ್ರೆಸ್ ಗೆ ಖುಷಿಯಾಗಿದೆ. ಆದರೆ ಬಿಜೆಪಿಯವರಿಗೇ ಖುಷಿಯಾಗಿಲ್ಲ. ಬಿಜೆಪಿ ವರ್ಸಸ್ ಬಿಜೆಪಿ ಮುಂದುವರೆದಿದೆ. ಪಾರ್ಟ್ 1 ಬಿ,ಎಲ್.ಸಂತೋಷ್ ಅವರದ್ದು, ಪಾರ್ಟ್ 2 ಇವರದ್ದು ಎಂಬಂತಾಗಿದೆ ಎಂದು ವ್ಯಂಗ್ಯವಾಡಿದರು.