ಬೆಂಗಳೂರು: ವಿಪಕ್ಷ ನಾಯಕ ಆರ್.ಅಶೋಕ್ ಅವರ ಲಾಜಿಕ್ ಪ್ರಕಾರ ಸಿ.ಟಿ.ರವಿ ಭಯೋತ್ಪಾದಕರಾ? ವಿ.ಸೋಮಣ್ಣ ಟೆರರಿಸ್ಟಾ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮತನಾಡಿದ ಪ್ರಿಯಾಂಕ್ ಖರ್ಗೆ, ಸುಮ್ಮನೇ ಮಾತನಾಡಬಾರದು, ವಿಪಕ್ಷ ನಯಕರ ಮಾತಿಗೆ ತೂಕವಿರಬೇಕು ಎಂದು ಗುಡುಗಿದರು.
ನಾವು ಭಯೋತ್ಪಾದಕರಿಂದ ಹೇಗೆ ಸಲಹೆ ಪಡೆಯಲು ಸಾಧ್ಯ? ಕಾಂಗ್ರೆಸ್ ನಾಯಕರು ಭಯೋತ್ಪಾದಕರ ಸೂಚನೆಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ರೀತಿ ಹೇಳಿಕೆಗಳನ್ನು ಸಹಿಸಲು ಸಾಧ್ಯವಿಲ್ಲ. ನಾವು ಟೆರರಿಸ್ಟ್ ಗಳಿಂದ ಹೇಗೆ ಸಲಹೆ ಪಡೆಯುತ್ತೇವೆ? ಬಲವಾದ ಮೂಲವಿದ್ದರೆ ಅಮಿತ್ ಶಾ ಅವರಿಗೆ ದೂರು ನೀಡಲಿ. 10 ವರ್ಷಗಳಿಂದ ಅವರದ್ದೇ ಸರ್ಕಾರ ಇತ್ತಲ್ಲವೇ? ಭಯೋತ್ಪಾದನೆ ನಿರ್ಮೂಲನೆಗೆ ಏನು ಮಾಡಿದ್ದಾರೆ? ನಮಗೆ ಇಲ್ಲಿ ಪಾಠ ಮಾಡುವ ಬದಲು ಕೆಲಸಕ್ಕೆ ಬರದ ವಿದೇಶಾಂಗ ಸಚಿವ ಜೈಶಂಕರ್ ಜೊತೆ ಮಾತನಾಡಿ ಎಂದು ವಾಗ್ದಾಳಿ ನಡೆಸಿದರು.
60 ಪ್ರಕರಣಗಳಲ್ಲಿ 43 ಪ್ರಕರಣಗಳನ್ನು ವಾಪಾಸ್ ಪಡೆದಿದ್ದೇವೆ. ಎಲ್ಲವನ್ನೂ ಕೂಲಂಕುಷವಾಗಿ ಚರ್ಚಿಸಿ ಕಾನೂನು ಪ್ರಕಾರ ವಾಪಾಸ್ ಪಡೆಯಲಾಗಿದೆ. ಇದರಲಿ ತಪ್ಪೇನಿದೆ? ಸಿ.ಟಿ.ರವಿ, ಸುಕುಮಾರ್ ಶೆಟ್ಟಿ, ಮೈಸೂರು ಮಹಿಳಾ ಮೋರ್ಚಾ ಕೇಸ್ ವಾಪಾಸ್ ಪಡೆದಿದ್ದೇವೆ. ವಿ.ಸೋಮಣ್ಣ ಅವರ ನಾಲ್ಕೈದು ಕೇಸ್ ವಾಪಾಸ್ ಪಡೆದಿದ್ದೇವೆ. ಹಾಗಾದರೆ ಇವರೆಲ್ಲರೂ ದೇಶದ್ರೋಹಿಗಳಾ? ಭಯೋತ್ಪಾದನೆ ನಡೆಸುತ್ತಿದ್ದಾರಾ? ಆರ್.ಅಶೋಕ್ ಹೇಳಿಕೆಯಲ್ಲಿ ಏನಾದರೂ ಲಾಜಿಕ್ ಇದೆಯಾ? ಬಿಜೆಪಿಗೆ ಮಾತನಾಡಲು ಯಾವುದೇ ವಿಷಯ ಸಿಗುತ್ತಿಲ್ಲ. ಹಾಗಾಗಿ ಸುಮ್ಮನೇ ಹಿಟ್ ಆಂಡ್ ರನ್ ಮಾಡುತ್ತಿದ್ದಾರೆ ಎಂದು ಹೇಳಿದರು.