
ಮಂಗಳೂರು: ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಗಿಂತ ಭಿನ್ನವಾಗಿ ಪ್ರಗತಿಪಥ ಎಂಬ ಯೋಜನೆಯನ್ನು ರಾಜ್ಯ ಸರ್ಕಾರ ಒಂದು ತಿಂಗಳಲ್ಲಿ ಜಾರಿಗೊಳಿಸಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಘೋಷಿಸಿದ್ದಾರೆ.
ಗ್ರಾಮಸ್ವರಾಜ್ ಪ್ರತಿಷ್ಠಾನದ ನೇತೃತ್ವದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಪಂಚಾಯಿತಿ ಇತರೆ ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಮಂಗಳೂರಿನ ಅಡ್ವಾಸ್ ಸಹ್ಯಾದ್ರಿ ಕ್ಯಾಂಪಸ್ ನಲ್ಲಿ ಶನಿವಾರ ನಡೆದ ಹೊಂಬೆಳಕು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಪ್ರಗತಿಪಥ ಹೆಸರಲ್ಲಿ 7110 ಕಿಲೋ ಮೀಟರ್ ಗ್ರಾಮೀಣ ರಸ್ತೆಗಳಿಗೆ 5190 ಕೋಟಿ ರೂ. ಖರ್ಚು ಮಾಡಲಾಗುವುದು. ಇಲ್ಲಿ ಪ್ರಗತಿಪಥ ಯೋಜನೆ ನಮ್ಮಲ್ಲಿ ಕಲ್ಯಾಣ ಪಥವಾಗಿ 1150 ಕಿಲೋಮೀಟರ್ ರಸ್ತೆಯನ್ನು ಒಂದು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದ್ದಾರೆ.
ಮುಂದಿನ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಎಎಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಯೋಜನೆಗೆ ಚಾಲನೆ ನೀಡಲಿದ್ದಾರೆ. ಪ್ರಾಕೃತಿಕ ವಿಕೋಪದಿಂದ ಹಾಳಾದ ಗ್ರಾಮೀಣ ರಸ್ತೆಗಳ ದುರಸ್ತಿಗಾಗಿ ಪ್ರತಿ ಕ್ಷೇತ್ರಕ್ಕೆ ತಲಾ 10 ಕೋಟಿ ರೂ.ಗಳಂತೆ 189 ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.