ಕಲಬುರಗಿ: ಅನುಮತಿ ಪರವಾನಿಗೆ ಪಡೆಯದೇ ಬ್ಯಾನರ್ ಹಾಕಿದ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಕಲಬುರ್ಗಿ ಮಹಾನಗರ ಪಾಲಿಕೆಯಿಂದ 5000 ರೂ. ದಂಡ ವಿಧಿಸಲಾಗಿದೆ.
ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲು ಆಗಮಿಸಿದ್ದ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಸ್ವಾಗತ ಕೋರಿ ಆಳಂದ ಚೆಕ್ ಪೋಸ್ಟ್ ಬಳಿ ಅವರ ಬೆಂಬಲಿಗರು ಬ್ಯಾನರ್ ಹಾಕಿದ್ದರು. ಆದರೆ, ಬ್ಯಾನರ್ ಅಳವಡಿಸಲು ಯಾವುದೇ ಅನುಮತಿ ಪಡೆದಿರಲಿಲ್ಲ. ಅದರಲ್ಲಿ ಸಚಿವರ ಬ್ಯಾನರ್ ಹಾಕಿದವರ ಹೆಸರು ಇಲ್ಲದ ಹಿನ್ನೆಲೆಯಲ್ಲಿ ಕಲಬುರ್ಗಿ ಪಾಲಿಕೆಯಿಂದ ಸಚಿವರಿಗೆ ದಂಡ ವಿಧಿಸಲಾಗಿದೆ.
ದಂಡದ ಹಣ ಪಾವತಿಸಲು ಪ್ರಿಯಾಂಕ್ ಖರ್ಗೆ ಒಪ್ಪಿಕೊಂಡಿದ್ದು, ತಮ್ಮ ಸಿಬ್ಬಂದಿಗೆ ದಂಡದ ಹಣ ಪಾವತಿಸಲು ಸೂಚನೆ ನೀಡಿದ್ದಾರೆ. ಅನುಮತಿ ಪಡೆಯದೆ ಬ್ಯಾನರ್ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಲು ಮಹಾನಗರ ಪಾಲಿಕೆಗೆ ಪ್ರಿಯಾಂಕ್ ಖರ್ಗೆ ಸೂಚನೆ ನೀಡಿದ್ದು, ಪಾಲಿಕೆಯ ಸಿಬ್ಬಂದಿ ಸಚಿವರಿಗೇ ದಂಡ ವಿಧಿಸಿ ಗಮನ ಸೆಳೆದಿದ್ದಾರೆ.