ಬೆಂಗಳೂರು: ಮೂರು ದಿನಗಳ ಕಾಲ ನಡೆದ ಬೆಂಗಳೂರು ಟೆಕ್ ಶೃಂಗಸಭೆ ಗುರುವಾರ ಮುಕ್ತಾಯವಾಗಿದೆ. ಈ ಸಂದರ್ಭದಲ್ಲಿ ಎಲೆಕ್ಟ್ರಾನಿಕ್ಸ್, ಐಟಿ ಬಿಟಿ ಇಲಾಖೆ, ರಾಜ್ಯ ಸರ್ಕಾರ, ಡಿಆರ್‌ಡಿಓ ನಡುವೆ ಕರ್ನಾಟಕ ರಕ್ಷಣಾ ಕೈಗಾರಿಕಾ ಪರಿಸರ ವ್ಯವಸ್ಥೆ ಸಹಕಾರ ಮತ್ತು ಪ್ರಚಾರದ ಕುರಿತ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಲಾಗಿದೆ.
ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯದಲ್ಲಿ ಮುಂದಿನ ವರ್ಷ ಕಾರ್ಪೊರೇಷನ್ ಸಂಸ್ಥೆಗಳು ಇಂಜಿನಿಯರಿಂಗ್ ಕಾಲೇಜುಗಳನ್ನು ದತ್ತು ಪಡೆಯಲು ನಿರ್ಧರಿಸಿವೆ. ಇದರಿಂದ ವಿದ್ಯಾರ್ಥಿಗಳ ಉದ್ಯೋಗದ ಭವಿಷ್ಯ ರೂಪಿಸಲು ಸರ್ಕಾರ ಪ್ರಯತ್ನಿಸಲಿದೆ ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳಿಗೆ ತರಬೇತಿ ಕೊರತೆಯಿಂದ ಉದ್ಯೋಗ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ತರಬೇತಿ ನೀಡಲು ಸೂಚಿಸಿದ್ದು, ಇದಕ್ಕೆ ಪೂರಕ ವಾತಾವರಣ ನಿರ್ಮಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ಆರಂಭಿಸಿದ ನಿಪುಣ ಕರ್ನಾಟಕ ಉಪಕ್ರಮದಿಂದ ವಿದ್ಯಾರ್ಥಿಗಳು ಹೆಚ್ಚು ತರಬೇತಿ ಪಡೆದ ಅತ್ಯುತ್ತಮ ಕೌಶಲ್ಯದ ಮೂಲಕ ವಿಶ್ವದ ಅತ್ಯಂತ ಉದ್ಯೋಗಶೀಲ ಯುವಕರಾಗಲಿದ್ದಾರೆ. ಪ್ರಮುಖ ಕಂಪನಿಗಳೊಂದಿಗೆ ಕೌಶಲ್ಯ ಮತ್ತು ಉದ್ಯೋಗಿಗಳ ರೂಪಾಂತರ ಹೆಚ್ಚಳಕ್ಕೆ ನಿಪುಣ ಕರ್ನಾಟಕ ಯೋಜನೆಯ ಮೂಲಕ ಕ್ರಮ ಕೈಗೊಳ್ಳಲಾಗಿದ್ದು, ಒಂದು ವರ್ಷದ ಅವಧಿಯಲ್ಲಿ ಒಂದು ಲಕ್ಷ ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ನೀಡಲಿದೆ ಎಂದು ತಿಳಿಸಿದ್ದಾರೆ.