ಬೆಂಗಳೂರು: ಕಾಡಾನೆ ದಾಳಿಗೆ ಬಲಿಯಾದ ಕೇರಳದ ವಯನಾಡ್ ಮೂಲದ ವ್ಯಕ್ತಿ ಕುಟುಂಬಕ್ಕೆ ಕರ್ನಾಟಕ ಸರ್ಕಾರದಿಂದ ಪರಿಹಾರ ನೀಡಿದ ವಿಚಾರ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ರಾಹುಲ್ ಗಾಂಧಿ ಮೆಚ್ಚಿಸಲು ಕೇರಳದ ಅವರ ಕ್ಷೇತ್ರದ ವ್ಯಕ್ತಿಗೆ ಕರ್ನಾಟಕ ಸರ್ಕಾರದಿಂದ 15 ಲಕ್ಷ ಪರಿಹಾರ ನೀಡಲಾಗಿದೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಇದೀಗ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ ನೀಡಿದ್ದಾರೆ.
ಕನ್ನಡಿಗರ ಶ್ರಮದ ದುಡಿಮೆಯ ತೆರಿಗೆ ರಾಹುಲ್ ಗಾಂಧಿಯ ವಯನಾಡ್ ಮಡಿಲಿಗೆ ಎಂಬ ಬಿಜೆಪಿ ಟೀಕೆಗೆ ಉತ್ತರಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ದಾಳಿ ಮಾಡಿದ್ದ ಆನೆ ಕರ್ನಾಟಕದ್ದು. ಹಾಸನದಲ್ಲಿ ವಶಕ್ಕೆ ಪಡೆಯಲಾಗಿತ್ತು. ಆನೆಗೆ ರೆಡಿಯೋ ಕಾಲರ್ ಕೂಡ ನಮ್ಮ ಇಲಾಖೆಯಿಂದಲೇ ಹಾಕಲಾಗಿತ್ತು. ಅದು ಬೇರೆ ರಾಜ್ಯಕ್ಕೆ ಹೋಗಿ ಓರ್ವ ವ್ಯಕ್ತಿಯ ಮೇಲೆ ದಾಳಿ ನಡೆಸಿದೆ ಎಂದು ಹೇಳಿದ್ದಾರೆ.
ವರದಿ ತರಿಸಿ ಮಾನವೀಯತೆಯ ದೃಷ್ಟಿಯಿಂದ ಕರ್ನಾಟಕ ಸರ್ಕಾರದಿಂದ ಪರಿಹಾರ ನೀಡಲಾಗಿದೆ. ಆನೆ ಸಂಬಾಳಿಸುತ್ತಿದ್ದುದು ಕರ್ನಾಟಕ ಸರ್ಕಾರ. ಮಾನವೀಯತೆಯನ್ನು ಮರೆಯಬಾರದು. ಬಿಜೆಪಿಯವರಿಗೆ ಏನು ಹೇಳಬೇಕು? ಎಂದು ಪ್ರಶ್ನಿಸಿದ್ದಾರೆ.
ಪರಿಹಾರ ಮೂಲಕ ನಮ್ಮ ರಾಜ್ಯದ ತೆರಿಗೆ ಬೇರೆ ರಾಜ್ಯಕ್ಕೆ ಹೋಯಿತಲ್ಲ ಎಂಬುದಕ್ಕೆ ಕನ್ನಡಿಗರಿಗೆ ಆಗುತ್ತಿರುವ ಇವರ ಅನ್ಯಾಯ 15 ಲಕ್ಷ ರೂಪಾಯಿ ಅಲ್ಲ. 1 ಲಕ್ಷ 77 ಕೋಟಿ ರೂ. ಅನ್ಯಾಯವಾಗಿರುವ ಬಗ್ಗೆ ಯಾಕೆ ಇವರು ಮಾತನಾಡುತ್ತಿಲ್ಲ? 15 ಲಕ್ಷ ರೂನಲ್ಲಿ ಕನ್ನಡಿಗರಿಗೆ ಅನ್ಯಾಯವಾಯ್ತು ಎನ್ನುತ್ತಿರುವ ಬಿಜೆಪಿಯವರು 1 ಲಕ್ಷ 77 ಕೋಟಿ ಅನ್ಯಾಯವಾಗಿರುವ ಬಗ್ಗೆ ಯಾಕೆ ಮಾತನಾಡುತ್ತಿಲ್ಲ? ನಮ್ಮ ಜೊತೆ ದೆಹಲಿಗೆ ಯಾಕೆ ಬಂದಿಲ್ಲ? ಇವರು ಕನ್ನಡಿಗರ, ರಾಜ್ಯದ ಪರವಾಗಿಲ್ಲ. ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.