
ಬೆಂಗಳೂರು: ರಾಜ್ಯದಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಅಭಿವೃದ್ಧಿಗೆ ಸರ್ಕಾರದಿಂದ ಶೀಘ್ರವೇ ತನ್ನದೇ ಆದ ಸಮಗ್ರ ಬಾಹ್ಯಾಕಾಶ ನೀತಿ ಪ್ರಕಟಿಸಲಾಗುವುದು ಎಂದು ಮಾಹಿತಿ ತಂತ್ರಜ್ಞಾನ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಘೋಷಣೆ ಮಾಡಿದ್ದಾರೆ.
ಬೆಂಗಳೂರಿನ ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಇಸ್ರೋ, ಇನ್ ಸ್ಪೇಸ್, ಎನ್ಎಸ್ಐಎಲ್, ಸಿಐಐ ಆಯೋಜಿಸಿದ್ದ 8ನೇ ಆವೃತ್ತಿಯ ಬಾಹ್ಯಾಕಾಶ ಎಕ್ಸ್ ಪೋ ಅಂತರಾಷ್ಟ್ರೀಯ ಸಮಾವೇಶ ಮತ್ತು ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಹೂಡಿಕೆಗೆ ಸಂಬಂಧಿಸಿದಂತೆ ಶೀಘ್ರವೇ ಸಮಗ್ರ ಬಾಹ್ಯಾಕಾಶ ನೀತಿ ಪ್ರಕಟಿಸಲಾಗುವುದು. ಭವಿಷ್ಯದ ಬಾಹ್ಯಾಕಾಶ ತಂತ್ರಜ್ಞಾನ ಅಭಿವೃದ್ಧಿಗೆ ರಾಜ್ಯವನ್ನು ಕೇಂದ್ರವಾಗಿಸಲು ಸರ್ಕಾರ ಬದ್ಧವಾಗಿದೆ. ರಾಜ್ಯದಲ್ಲಿ ಉತ್ಕೃಷ್ಟತಾ ಕೇಂದ್ರ ತೆಗೆಯಲಾಗುತ್ತದೆ. ಇಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಹಬ್ ಗಳನ್ನು ರೂಪಿಸುವ ಕೇಂದ್ರ ತೆರೆಯಲಾಗುವುದು ಎಂದರು.
ಜಾಗತಿಕ ಮಟ್ಟದಲ್ಲಿ ದೇಶವು ಬಾಹ್ಯಾಕಾಶ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಲು ರಾಜ್ಯ ತನ್ನದೇ ಆದ ಕೊಡುಗೆ ನೀಡುತ್ತಿದೆ. ಇದಕ್ಕಾಗಿ ಸರ್ಕಾರಿ ನೀತಿ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಬೆಂಬಲ, ಮೂಲಸೌಕರ್ಯ ಅಭಿವೃದ್ಧಿಯ ಪೂರಕ ಪರಿಸರ ವ್ಯವಸ್ಥೆ ನಮ್ಮಲ್ಲಿದೆ ಎಂದು ಹೇಳಿದ್ದಾರೆ.