ಬೆಂಗಳೂರು: ಖಾಸಗಿ ಸಾರಿಗೆ ಒಕ್ಕೂಟ ಕರೆ ನೀಡಿರುವ ಬೆಂಗಳೂರು ಬಂದ್ ಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಕೆಲ ಆಟೋ ಹಾಗೂ ಕ್ಯಾಬ್, ರ್ಯಾಪಿಡೋ ಬೈಕ್ ಚಾಲಕರು ಬಂದ್ ಗೆ ಬೆಂಬಲ ನೀಡದೇ ವಾಹನ ಚಲಾಯಿಸಿದ್ದರಿಂದ ಮುಷ್ಕರ ನಿರತರು ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ರೆಸಿಡೆನ್ಸಿ ರಸ್ತೆಯಲ್ಲಿ ಬಾಡಿಗೆ ತೆರಳಿದ ಆಟೋ ಚಾಲಕನನ್ನು ಹಿಡಿದು ಮುಷ್ಕರ ನಿರತ ಕೆಲ ಆಟೋ ಹಾಗೂ ಕ್ಯಾಬ್ ಚಾಲಕರು ಥಳಿಸಿದ್ದಾರೆ. ಹಲ್ಲೆಯಿಂದಾಗಿ ಆಟೋ ಚಾಲಕನ ಭುಜಕ್ಕೆ ಗಾಯಗಳಾಗಿವೆ.
ಸಂಗೊಳ್ಳಿ ರಾಯಣ್ಣ ಫ್ಲೈ ಓವರ್ ಮೇಲೆ ರ್ಯಾಪಿಡೋ ಬೈಕ್ ಚಾಲಕ ಹಾಗೂ ಸವಾರನ ಮೇಲೆಯೂ ಹಲ್ಲೆ ನಡೆಸಲಾಗಿದೆ. ಇನ್ನೊಂದೆಡೆ ಗಾಂಧಿನಗರ ಮೌರ್ಯ ಸರ್ಕಲ್ ನಲ್ಲಿ ಕ್ಯಾಬ್ ಚಾಲಕನನ್ನು ಅಡ್ಡಗಟ್ಟಿದ ಪ್ರತಿಭಟನಾಕಾರರು, ಚಾಲಕನನ್ನು ಕ್ಯಾಬ್ ನಿಂದ ಹೊರಗೆಳೆದು ಹಲ್ಲೆ ನಡೆಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ದೌಡಾಯಿಸಿ, ಕ್ಯಾಬ್ ಚಾಲಕನನ್ನು ರಕ್ಷಿಸಿದ್ದಾರೆ.