ಬೆಂಗಳೂರು: ಖಾಸಗಿ ಸಾರಿಗೆ ವಾಹನಗಳ ಒಕ್ಕೂಟ ಕರೆ ನೀಡಿರುವ ಬೆಂಗಳೂರು ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಬಂದ್ ನಡುವೆಯೂ ವಾಹನ ಓಡಿಸುತ್ತಿದ್ದ ಚಾಲಕರಿಗೆ ಸಂಘಟನೆಗಳು ಶಾಕ್ ನೀಡಿವೆ.
ಬಂದ್ ಗೆ ಬೆಂಬಲಿಸದೇ ಕೆಲವೆಡೆ ಆಟೋ, ಕಾರುಗಳನ್ನು ಓಡಿಸುತ್ತಿದ್ದು, ಇದರಿಂದ ಖಾಸಗಿ ಸಾರಿಗೆ ಒಕ್ಕೂಟದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಲ್ಕ್ ಬೋರ್ಡ್ ಬಳಿ ಬಂದ್ ಮಧ್ಯೆ ಓಡಾಡುತ್ತಿದ್ದ ಆಟೋವನ್ನು ಹಿಡಿದ ಸಂಘಟನೆ ಮುಖಂಡರು, ಆಟೋ ಟೈರ್ ಗಾಳಿ ತೆಗೆದಿದ್ದಾರೆ. ಮುಷ್ಕರದಲ್ಲಿ ಪಾಲ್ಗೊಳ್ಳುವಂತೆ ಸೂಚಿಸಿದ್ದಾರೆ.
ಇನ್ನು ನಗರದ ಹಲವೆಡೆ ಓಡಾಡುತ್ತಿರುವ ಖಾಸಗಿ ವಾಹನಗಳ ಮೇಲೆ ಕಲ್ಲುತೂರಾಟ, ಮೊಟ್ಟೆ ತೂರಾಟ ಪ್ರಕರಣಗಳು ನಡೆಯುತ್ತಿವೆ. ಅಲ್ಲದೇ ಖಾಸಗಿ ಸಾರಿಗೆ ವಾಹನಗಳು ಬಂದ್ ನಲ್ಲಿ ಭಾಗಿಯಾಗುವಂತೆ ಮೈಕ್ ನಲ್ಲಿ ಘೋಷಿಸಲಾಗುತ್ತಿದೆ.