ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಡೆಸಿದ 5, 8 ಮತ್ತು 9ನೇ ತರಗತಿಯ ಬೋರ್ಡ್ ಪರೀಕ್ಷೆಯ ಮೌಲ್ಯಮಾಪನದಲ್ಲಿ ಲೋಪ ದೋಷಗಳು ಕಂಡು ಹೊಂದಿವೆ ಎಂದು ಖಾಸಗಿ ಶಾಲಾ ಸಂಘಟನೆ ಕ್ಯಾಮ್ಸ್ ಆರೋಪಿಸಿದೆ.
ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಟಿ. ಶಶಿಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ 5, 8 ಮತ್ತು 9ನೇ ತರಗತಿ ಪರೀಕ್ಷೆ ಮೌಲ್ಯಾಂಕನದ ಫಲಿತಾಂಶವನ್ನು ಆಯಾ ಶಾಲೆಗಳಿಗೆ ಕಳುಹಿಸಿದೆ. ಇದರಲ್ಲಿ ಅನೇಕ ಲೋಪದೋಷಗಳು ಕಂಡು ಬಂದಿವೆ ಎಂದು ತಿಳಿಸಿದ್ದಾರೆ.
ಮೌಲ್ಯಾಂಕನ ಸಂಬಂಧ ಶಾಲಾವಾರು ಫಲಿತಾಂಶ ಮತ್ತು ಉತ್ತರ ಪತ್ರಿಕೆಗಳನ್ನು ಮಂಡಳಿ ಕಳುಹಿಸಿದ್ದು, ಮೌಲ್ಯಾಂಕನದಲ್ಲಿ ಅನೇಕ ಲೋಪ ದೋಷಗಳು ಇರುವುದಾಗಿ ಶಾಲಾ ಆಡಳಿತ ಮಂಡಳಿಗಳು ಮಾಹಿತಿ ನೀಡಿವೆ. ಸರಿ ಉತ್ತರ ಬರೆದಿದ್ದರೂ ಸರಿಯಾದ ಅಂಕ ನೀಡಲಾಗಿದೆ. ಉತ್ತಮವಾಗಿ ಓದುವ ಮಕ್ಕಳ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಕಡಿಮೆ ಅಂಕ ನೀಡಲಾಗಿದೆ. ಫಲಿತಾಂಶದ ಅಂಕಿ ಅಂಶಗಳ ಲೆಕ್ಕವನ್ನು ತಪ್ಪಾಗಿ ಮಾಡಲಾಗಿದೆ. ಕೆಲವು ವಿಷಯಗಳಲ್ಲಿ ಗರಿಷ್ಠ ಅಂಕಗಳಿಗಿಂತ ಹೆಚ್ಚು ಅಂಕ ನೀಡಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.
ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ತ್ವರಿತವಾಗಿ ಪೂರ್ಣಗೊಳಿಸಲು ಪ್ರಾಥಮಿಕ ಶಾಲಾ ಶಿಕ್ಷಕರಿಂದ ಪ್ರೌಢಶಾಲಾ ವಿದ್ಯಾರ್ಥಿಗಳ ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡಿಸಲಾಗಿದೆ. ಸರಿ ಉತ್ತರಗಳಿಗೂ ಅಂಕ ಪಡಿತ ಮಾಡಲಾಗಿದೆ. ಕೆಲವು ಬಂಡಲ್ ಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಿಲ್ಲ ಎಂದು ಹೇಳಲಾಗಿದ್ದು, ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.