ದೆಹಲಿಯ ಖಾಸಗಿ ಆಸ್ಪತ್ರೆ ವೈದ್ಯರು ಯಶಸ್ವಿ ಕೆಲಸ ಮಾಡಿದ್ದಾರೆ. ಮಹಿಳೆ ಗರ್ಭಾಶಯದಿಂದ 106 ಫೈಬ್ರಾಯ್ಡ್ ಗಳನ್ನು ತೆಗೆದಿದ್ದಾರೆ. ಇದು ಕ್ಯಾನ್ಸರ್ ಗಡ್ಡೆಯಲ್ಲವೆಂದು ವೈದ್ಯರು ಹೇಳಿದ್ದಾರೆ.
ಫೆಬ್ರವರಿಯಲ್ಲಿ 29 ವರ್ಷದ ಯುವತಿಯನ್ನು ಬಿಎಲ್‌ಕೆ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಹಿಳೆಯ ಸ್ಥಿತಿ ತುಂಬಾ ಗಂಭೀರವಾಗಿದ್ದು, ತೀವ್ರ ನೋವಿನಿಂದ ಬಳಲುತ್ತಿದ್ದಳು. ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ಕರೆತರಲಾಗಿತ್ತು ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದೆ. ಮಹಿಳೆ ಹಿಮೋಗ್ಲೋಬಿನ್ ಮಟ್ಟವು ಪ್ರತಿ ಡೆಸಿಲಿಟರ್‌ಗೆ 7.2 ಮಿಲಿಗ್ರಾಂಗೆ ಇಳಿದಿತ್ತು. ಅಲ್ಟ್ರಾಸೌಂಡ್ ನಲ್ಲಿ ಮಹಿಳೆ ಹೊಟ್ಟೆಯಲ್ಲಿ ಫೈಬ್ರಾಯ್ಡ್ ಇರುವುದು ಪತ್ತೆಯಾಗಿತ್ತು.
ಗರ್ಭಾಶಯದ ಫೈಬ್ರಾಯ್ಡ್ ಗಳು ಸಾಮಾನ್ಯವಾಗಿ ಗರ್ಭಾಶಯದ ಕ್ಯಾನ್ಸರ್ ಅಲ್ಲದ ಗೆಡ್ಡೆಗಳಾಗಿವೆ. ಅದು ಸಂತಾನೋತ್ಪತ್ತಿ ಮೇಲೆ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಯಾವುದೇ ರೋಗಲಕ್ಷಣವಿರುವುದಿಲ್ಲ. ಕೆಲವೊಮ್ಮೆ ಇದು ಭಾರೀ ರಕ್ತಸ್ರಾವ, ರಕ್ತಹೀನತೆ, ಹೊಟ್ಟೆ ನೋವು ಅಥವಾ ಬಂಜೆತನಕ್ಕೆ ಕಾರಣವಾಗಬಹುದು. ಮಹಿಳೆ ಹೊಟ್ಟೆ ಎಂಟು ತಿಂಗಳ ಗರ್ಭಿಣಿಯಂತೆ ಕಾಣುತ್ತಿತ್ತು. ಸುಮಾರು ನಾಲ್ಕುವರೆ ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ವೈದ್ಯರು 106 ಫೈಬ್ರಾಯ್ಡ್ ಗಳನ್ನು ತೆಗೆದುಹಾಕಿದ್ದಾರೆ.