
ಬೆಂಗಳೂರು: ಹಬ್ಬದ ಸಂದರ್ಭದಲ್ಲಿ ಬೇಕಾಬಿಟ್ಟಿ ದರ ಹೆಚ್ಚಿಸುವ ಚಾಳಿಯನ್ನು ಖಾಸಗಿ ಬಸ್ ಮಾಲೀಕರು ಮುಂದುವರೆಸಿದ್ದಾರೆ.
ಯುಗಾದಿ, ರಂಜಾನ್ ಹಬ್ಬ ಹಿನ್ನೆಲೆಯಲ್ಲಿ ಸಾಲು ಸಾಲು ರಜೆ ಎಂದು ಊರಿಗೆ ತೆರಳುವವರಿಗೆ ಪ್ರಯಾಣಿಕರಿಂದ ದುಬಾರಿ ದರ ವಸೂಲಿಗೆ ಮುಂದಾಗಿದ್ದಾರೆ. ಹಬ್ಬಗಳ ಸಂದರ್ಭದಲ್ಲೇ ಖಾಸಗಿ ಬಸ್ ಮಾಲೀಕರು ಬೇಕಾಬಿಟ್ಟಿ ದರ ನಿಗದಿ ಮಾಡುತ್ತಿದ್ದರೂ, ಸಾರಿಗೆ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ.
ಮಾರ್ಚ್ 28 ರಿಂದ ಖಾಸಗಿ ಬಸ್ ಗಳ ಪ್ರಯಾಣದರ ಬಲು ದುಬಾರಿಯಾಗಿದೆ. ಬೆಂಗಳೂರು ನಿಂದ ಮಂಗಳೂರಿಗೆ ಸಾಮಾನ್ಯ ದಿನಗಳಲ್ಲಿ 800 ರಿಂದ 1200 ರೂ.ವರೆಗೆ ಇದ್ದ ಟಿಕೆಟ್ ದರ ಈಗ 2000- 3000 ರೂ.ಗೆ ಹೆಚ್ಚಳವಾಗಿದೆ.
ಬೆಂಗಳೂರಿನಿಂದ ಶಿವಮೊಗ್ಗಕ್ಕೆ 600- 800 ರೂ. ಇದ್ದ ಟಿಕೆಟ್ ದರ 1,500 ರೂ.ವರೆಗೆ ಹೆಚ್ಚಳವಾಗಿದೆ. ಬೆಂಗಳೂರಿನಿಂದ ಧಾರವಾಡಕ್ಕೆ 800-1,200 ರೂ. ದರ ಇದ್ದು, ಈಗ 2000 ರಿಂದ 3500 ರೂ.ವರೆಗೆ ಹೆಚ್ಚಳವಾಗಿದೆ ಎಂದು ಹೇಳಲಾಗಿದೆ.