ಬೆಂಗಳೂರು: ವಾರಾಂತ್ಯದೊಂದಿಗೆ ಯುಗಾದಿ, ರಂಜಾನ್ ಸೇರಿ ಸಾಲು ಸಾಲು ರಜೆ ಹಿನ್ನೆಲೆ ಊರು, ಪ್ರವಾಸಕ್ಕೆ ಹೊರಟವರ ಸಂಖ್ಯೆ ಹೆಚ್ಚಳವಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಬಸ್ ಗಳು ಸಾಮಾನ್ಯ ದಿನಗಳಿಗಿಂತ ಶೇಕಡ 50ರಷ್ಟು ಅಧಿಕ ಟಿಕೆಟ್ ದರ ಏರಿಕೆ ಮಾಡಿವೆ. ಇದರಿಂದ ಪ್ರಯಾಣಿಕರಿಗೆ ಹೊರೆಯಾಗಿ ಪರಿಣಮಿಸಿದೆ.
ಸಾಮಾನ್ಯ ದಿನಗಳಲ್ಲಿ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಖಾಸಗಿ ಬಸ್ ಗಳಲ್ಲಿ 450-600 ರೂ. ದರ ಇದ್ದು, ಈಗ 1000 -1250 ರೂ.ವರೆಗೆ ಏರಿಕೆಯಾಗಿದೆ. ಬೆಂಗಳೂರಿಂದ ಮಂಗಳೂರಿಗೆ 850-900 ರೂ. ಟಿಕೆಟ್ ದರ ಈಗ 1,400 -1,800 ರೂ. ವರೆಗೆ ಹೆಚ್ಚಳವಾಗಿದೆ. ಬೆಂಗಳೂರಿನಿಂದ ಶಿರಸಿಗೆ ಸಾಮಾನ್ಯ ದಿನಗಳಲ್ಲಿ 650-850 ರೂ. ಈಗ 1000-1500 ರೂ. ವರೆಗೆ ಏರಿಕೆಯಾಗಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್ಆರ್ಟಿಸಿ ಏಪ್ರಿಲ್ 6ರಿಂದ 8ರವರೆಗೆ 2275 ಹೆಚ್ಚುವರಿ ಬಸ್ ಗಳನ್ನು ಓಡಿಸಲಿದೆ. ಮುಂಗಡ ಟಿಕೆಟ್ ಗೆ ಅವಕಾಶ ಕಲ್ಪಿಸಿದ್ದು, ಪ್ರಯಾಣಿಕರಿಗೆ ಅನುಕೂಲವಾಗಿದೆ.
ಪ್ರತಿ ಬಾರಿ ಹಬ್ಬದ ಸಮಯದಲ್ಲಿ ಆನ್ಲೈನ್ ಬುಕಿಂಗ್ ಆ್ಯಪ್ ಗಳು ಹೆಚ್ಚಿನ ಕಮಿಷನ್ ಸಿಗುವ ಕಾರಣಕ್ಕೆ ಟಿಕೆಟ್ ದರವನ್ನು ದುಪ್ಪಟ್ಟು ಮಾಡುತ್ತಿವೆ. ಇದಕ್ಕೆ ಸರ್ಕಾರ ಕಡಿವಾಣ ಹಾಕಬೇಕಿದೆ. ಆದರೆ, ಆ ರೀತಿ ಮಾಡದೇ ಖಾಸಗಿ ಬಸ್ ಗಳ ಮಾಲೀಕರನ್ನು ದೂರಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಖಾಸಗಿ ಬಸ್ ಮಾಲೀಕರ ಸಂಘ ಆಕ್ರೋಶ ವ್ಯಕ್ತಪಡಿಸಿದೆ. ಹಬ್ಬದ ಸಮಯದಲ್ಲಿ ಬೇಡಿಕೆ ಹೆಚ್ಚಾಗಿರುತ್ತದೆ. ಬೆಂಗಳೂರಿನಿಂದ ಸೀಟುಗಳು ಭರ್ತಿಯಾದರೂ, ವಾಪಸ್ ಬರುವಾಗ ಪ್ರಯಾಣಿಕರು ಇರುವುದಿಲ್ಲ. ಹೀಗಾಗಿ ಟಿಕೆಟ್ ದರ 20 – 50ರಷ್ಟು ಹೆಚ್ಚಳ ಸಾಮಾನ್ಯವೆಂದು ಖಾಸಗಿ ಬಸ್ ಮಾಲೀಕರು ಹೇಳುತ್ತಾರೆ.