ಬೆಂಗಳೂರು: ಕೆಎಸ್ಆರ್ಟಿಸಿ ಬಸ್ ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಶಕ್ತಿ ಯೋಜನೆ ಜಾರಿಗೊಳಿಸಲಾಗಿದೆ. ಈ ಯೋಜನೆ ಜಾರಿಯಾದ ನಂತರ ರಾಜ್ಯದಲ್ಲಿ 20,000 ಖಾಸಗಿ ಬಸ್ ಗಳು ಸಂಚಾರ ಸ್ಥಗಿತಗೊಳಿಸಿವೆ. ಇದರಿಂದಾಗಿ ಈ ಬಸ್ ಗಳನ್ನು ನಂಬಿಕೊಂಡಿದ್ದ ಕುಟುಂಬದವರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕೊರೋನಾದಿಂದಾಗಿ ಖಾಸಗಿ ಸಾರಿಗೆ ವಲಯ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಕೊರೋನಾ ನಂತರ ಅಲ್ಪ ಚೇತರಿಕೆ ಕಂಡಿತ್ತು. ಈಗ ಶಕ್ತಿ ಯೋಜನೆ ಬಳಿಕ ಮತ್ತೆ ತೀವ್ರ ಸಂಕಷ್ಟಕ್ಕೆ ಸಿಲುಕಿದೆ, ರಾಜ್ಯದಲ್ಲಿ ಸುಮಾರು 70,000 ಖಾಸಗಿ ಬಸ್ ಗಳಿದ್ದು, ಶೇಕಡ 40ಕ್ಕು ಹೆಚ್ಚು ಬಸ್ ಗಳಲ್ಲಿ ಪ್ರಯಾಣಿಕರ ಕೊರತೆ, ತೆರಿಗೆ ಹೊರೆ ಸೇರಿದಂತೆ ವಿವಿಧ ಕಾರಣಗಳಿಂದ ಸಂಚಾರ ಸ್ಥಗಿತಗೊಳಿಸಲಾಗಿದೆ.
ಕೆ.ಎಸ್.ಆರ್.ಟಿ.ಸಿ. ಬಸ್ ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಾರೆ. ಅವರ ಕುಟುಂಬದವರು ಕೂಡ ಅವರೊಂದಿಗೆ ಸರ್ಕಾರಿ ಬಸ್ ಗಳಲ್ಲಿ ಪ್ರಯಾಣಿಸುವುದರಿಂದ ಖಾಸಗಿ ಬಸ್ ಗಳಿಗೆ ಬೇಡಿಕೆ ಇಲ್ಲವಾಗಿದೆ. ಖಾಸಗಿ ಬಸ್ ಗಳನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಲಕ್ಷಾಂತರ ಕುಟುಂಬಗಳಿಗೆ ಸಂಕಷ್ಟ ಎದುರಾಗಿದೆ. ಹೀಗಾಗಿ ಖಾಸಗಿ ಬಸ್ ಗಳಲ್ಲಿ ಜೀವನೋಪಾಯ ಮಾಡಿಕೊಂಡಿದ್ದವರು ಬೇರೆ ಕೆಲಸ ಹುಡುಕಿಕೊಳ್ಳಬೇಕಿದೆ. ಖಾಸಗಿ ಸಾರಿಗೆ ವಲಯಕ್ಕೆ ತೆರಿಗೆ ವಿನಾಯಿತಿ ನೀಡಬೇಕು. ಖಾಸಗಿ ಬಸ್ ಗಳನ್ನು ಶಕ್ತಿ ಯೋಜನೆಗೆ ಒಳಪಡಿಸಬೇಕು. ಖಾಸಗಿ ಸಾರಿಗೆ ವಲಯಕ್ಕೆ ನೆರವು ನೀಡಬೇಕೆಂಬ ಬೇಡಿಕೆ ಇದೆ.