ಬೆಂಗಳೂರು: ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ಜನ ಊರಿಗೆ ತೆರಳುತ್ತಿದ್ದು, ಪ್ರಯಾಣಿಕರ ದಟ್ಟಣೆ ಹೆಚ್ಚಾಗಿರುವುದನ್ನೇ ಬಂಡವಾಳ ಮಾಡಿಕೊಂಡು ಬೇಕಾಬಿಟ್ಟಿಯಾಗಿ ಪ್ರಯಾಣದರ ಹೆಚ್ಚಳ ಮಾಡಿದ ಖಾಸಗಿ ಬಸ್ ಗಳ ವಿರುದ್ಧ ಬುಧವಾರ ರಾತ್ರಿ ಸಾರಿಗೆ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.
ಸಾರಿಗೆ ಇಲಾಖೆಯಿಂದ 10 ತಂಡಗಳನ್ನು ರಚಿಸಿ ವಿಶೇಷ ಕಾರ್ಯಾಚರಣೆ ನಡೆಸಲಾಗಿದ್ದು, ಬೇಕಾಬಿಟ್ಟಿಯಾಗಿ ಟಿಕೆಟ್ ದರ ಹೆಚ್ಚಳ ಮಾಡಿದ್ದ 20 ಬಸ್ ಗಳಿಗೆ ದಂಡ ವಿಧಿಸಲಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ದುಬಾರಿ ಪ್ರಯಾಣದರ ವಸೂಲಿ ಮಾಡುವ ಖಾಸಗಿ ಬಸ್ ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಬೆಂಗಳೂರಿನಿಂದ ವಿವಿಧೆಡೆ ತೆರಳುವ ಖಾಸಗಿ ಬಸ್ ಗಳ ತಪಾಸಣೆ ನಡೆಸಲಾಗಿದೆ. ಆನಂದರಾವ್ ಸರ್ಕಲ್, ಮೆಜೆಸ್ಟಿಕ್, ಹೆಬ್ಬಾಳ, ಗೊರಗುಂಟೆಪಾಳ್ಯ, ಕಲಾಸಿಪಾಳ್ಯ, ಹೊಸಕೋಟೆ ಟೋಲ್ ಸಮೀಪ, ಮೈಸೂರು ರಸ್ತೆ ಸೇರಿದಂತೆ ಹಲವು ಕಡೆಗಳಲ್ಲಿ ಪರಿಶೀಲನೆ ನಡೆಸಲಾಗಿದೆ.
ಪ್ರಯಾಣಿಕರಿಂದ ಪ್ರಯಾಣದರದ ಮಾಹಿತಿ ಪಡೆಯಲಾಗಿದ್ದು, ಮಾಮೂಲಿಗಿಂತ ಎರಡು ಮೂರು ಪಟ್ಟು ಹೆಚ್ಚಿನ ಟಿಕೆಟ್ ದರ ಪಡೆದ ಬಸ್ ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಇನ್ನು ಎರಡು ದಿನಗಳ ಕಾಲ ಖಾಸಗಿ ಬಸ್ ಗಳ ವಿರುದ್ಧ ಕಾರ್ಯಾಚರಣೆ ಮುಂದುವರಿಸಲಾಗುವುದು ಎಂದು ಹೇಳಲಾಗಿದೆ.