ಬೆಂಗಳೂರು: ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆ ಜಾರಿಯಾದ ನಂತರ ಖಾಸಗಿ ಸಾರಿಗೆಗೆ ನಷ್ಟವಾಗಿದ್ದು, ಸಮಸ್ಯೆ ಬಗೆಹರಿಸಲು ಮೂರು ದಿನಗಳ ಗಡುವು ನೀಡಲಾಗಿದೆ. ಸಮಸ್ಯೆ ಬಗೆಹರಿಸದಿದ್ದರೆ ರಾಜ್ಯವ್ಯಾಪಿ ಖಾಸಗಿ ಸಾರಿಗೆ ಬಂದ್ ಮಾಡಲಾಗುವುದು ಎಂದು ಹೇಳಲಾಗಿದೆ.
ಖಾಸಗಿ ಬಸ್ ಕ್ಯಾಬ್ ಆಟೋಗಳಿಗೆ ತೊಂದರೆಯಾಗಿತ್ತು ಸಮಸ್ಯೆ ಬಗೆಹರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಸ್ಟ್ 30ರೊಳಗೆ ನಿರ್ಧಾರ ಕೈಗೊಳ್ಳದಿದ್ದರೆ ಖಾಸಗಿ ಸಾರಿಗೆ ಬಂದ್ ಗೆ ಕರೆ ನೀಡಲಾಗುವುದು ಎಂದು ರಾಜ್ಯ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಈ ಹಿಂದೆ ಕೊರೋನಾದಿಂದ ಸಂಕಷ್ಟಕ್ಕೆ ಒಳಗಾಗಿದ್ದ ಖಾಸಗಿ ಸಾರಿಗೆ ಉದ್ಯಮಕ್ಕೆ ಶಕ್ತಿ ಯೋಜನೆಯಿಂದ ದೊಡ್ಡ ಪೆಟ್ಟು ಬಿದ್ದಿದೆ. ಸಮಸ್ಯೆ ಬಗೆಹರಿಸಲು 32 ಸಂಘಟನೆಗಳು ಸರ್ಕಾರಕ್ಕೆ ಒತ್ತಾಯಿಸಿ ಬಂದ್ ಗೆ ಕರೆ ನೀಡಲಾಗಿತ್ತು. ಆಗಸ್ಟ್ 21 ರಂದು ಮುಖ್ಯಮಂತ್ರಿಗಳು ಸಾರಿಗೆ ಸಂಘಟನೆಗಳೊಂದಿಗೆ ಸಭೆಯನ್ನು ನಡೆಸಿದ್ದರು. ಆದರೆ, ಬಂದ್ ಗೆ ಕರೆ ನೀಡಿದ ಸಂಘಟನೆಗಳನ್ನು ಸಭೆಗೆ ಕರೆದಿರಲಿಲ್ಲ. ಹಾಗಾಗಿ 32 ಸಂಘಟನೆಗಳು ಸಭೆ ಬಹಿಷ್ಕರಿಸಿದ್ದವು.
ಸಂಕಷ್ಟದಲ್ಲಿರುವ ಸಾರಿಗೆ ಉದ್ಯಮಕ್ಕೆ ಪರಿಹಾರ ನೀಡಬೇಕೆಂದು ಒತ್ತಾಯಿಸಲಾಗಿದೆ. ಒಕ್ಕೂಟದ ಅಧ್ಯಕ್ಷ ನಟರಾಜ ಶರ್ಮಾ ಅವರು, ಶಕ್ತಿ ಯೋಜನೆಯಿಂದ ಆಟೋ ಚಾಲಕರು, ಖಾಸಗಿ ಬಸ್, ಕ್ಯಾಬ್ ಮಾಲೀಕರು ಕಷ್ಟದಲ್ಲಿದ್ದಾರೆ. ಸಮಸ್ಯೆ ಬಗೆಹರಿಸಲು ಸರ್ಕಾರ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಸಭೆ ನಡೆಸಿ ಬಂದ್ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಆಗಸ್ಟ್ 30 ಅಥವಾ ಸೆಪ್ಟೆಂಬರ್ 1 ರಿಂದ ಬಂದ್ ನಡೆಸುವ ದಿನಾಂಕ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.