ಬೆಂಗಳೂರು : ಮಹಿಳೆಯರಿಗೆ ಉಚಿತ ಪ್ರಯಾಣದ ಸೇವೆ ನೀಡಿದ ‘ಶಕ್ತಿ ಯೋಜನೆ’ ವಿರುದ್ಧ ಆಟೋ, ಟ್ಯಾಕ್ಸಿ, ಖಾಸಗಿ ಬಸ್ ಸಂಘಟನೆಗಳು ಸಿಡಿದೆದ್ದಿವೆ. ಈ ಹಿನ್ನೆಲೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಲು ಜುಲೈ 27 ರಂದು ಬಂದ್ ಗೆ ಕರೆ ನೀಡಿದೆ.
ಖಾಸಗಿ ಬಸ್, ಟ್ಯಾಕ್ಸಿ ಮತ್ತು ಆಟೋ ಸಂಘಟನೆಗಳು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ದು, ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸರ್ಕಾರದ ಗಮನ ಸೆಳೆಯಲಿದೆ. ಅಂದು ಆಟೋ, ಟ್ಯಾಕ್ಸಿ, ಖಾಸಗಿ ಬಸ್ ಸಂಚಾರ ಅನುಮಾನ ಎನ್ನಲಾಗಿದೆ.
ಸಂಕಷ್ಟದಲ್ಲಿರುವ ಚಾಲಕರಿಗೆ ಸರ್ಕಾರ ಪ್ರತಿ ತಿಂಗಳು 10 ಸಾವಿರ ರೂ. ಪರಿಹಾರ ನೀಡಬೇಕು. ಎಂದು ಬೆಂಗಳೂರು ಆಟೋರಿಕ್ಷಾ ಚಾಲಕರ ಸಂಘಟನೆಗಳ ಒಕ್ಕೂಟ ಒತ್ತಾಯಿಸಿದೆ. ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣದ ಸೌಕರ್ಯ ಕಲ್ಪಿಸಿರುವುದರಿಂದ ಆಟೋ ಚಾಲಕರು ನಷ್ಟಕ್ಕೆ ಒಳಗಾಗಿದ್ದಾರೆ. ಸರ್ಕಾರ ಭರವಸೆ ನೀಡಿದ್ದಂತೆ ರ್ಯಾಪಿಡ್ ಬೈಕ್ ಟ್ಯಾಕ್ಸಿ ನಿಷೇಧಿಸಬೇಕು, ಅಸಂಘಟಿತ ವಾಣಿಜ್ಯ ಚಾಲಕರಿಗಾಗಿ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು. ಎಲೆಕ್ಟ್ರಿಕ್ ಆಟೋ ರಿಕ್ಷಾಗಳಿಗೆ ರಹದಾರಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಉಚಿತ ಪ್ರಯಾಣ ಯೋಜನೆಯಿಂದ ನಮಗೆ ಬಹಳ ತೊಂದರೆಯಾಗಿದೆ. ಮೊದಲು ನಮಗೆ ಮಹಿಳಾ ಪ್ರಯಾಣಿಕರು ಹೆಚ್ಚಿರುತ್ತಿದ್ದರು. ಆದರೆ ಸರ್ಕಾರ ಉಚಿತ ಬಸ್ ಸೇವೆ ಕೊಟ್ಟ ಮೇಲೆ ಯಾರೂ ಆಟೋ ಹತ್ತುತ್ತಿಲ್ಲ. ಸರ್ಕಾರಿ ಬಸ್ ಗಳು ರಶ್ ಆಗಿ ಓಡಾಡುತ್ತಿದೆ, ಆದರೆ ಆಟೋ ಖಾಲಿಯಾಗಿ ಓಡಾಡುತ್ತಿದೆ.ಆಟೋ ಚಾಲಕರ ಸಮಸ್ಯೆ ಬಗೆಹರಿಸದೇ ಇದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.