ಮುಂಬೈನ ಐಷಾರಾಮಿ ರೆಸ್ಟೋರೆಂಟ್ ಬಳಿ ಕ್ರಿಕೆಟಿಗ ಪೃಥ್ವಿ ಶಾ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಪ್ರಕರಣಕ್ಕೆ ಈಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಈ ಪ್ರಕರಣದಲ್ಲಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ನಟಿ ಹಾಗೂ ಸೋಶಿಯಲ್ ಮೀಡಿಯಾ ಇನ್ಫ್ಲುಯನ್ಸರ್ ಸಪ್ನಾ ಗಿಲ್, ಜಾಮೀನಿನ ಮೇಲೆ ಹೊರ ಬರುತ್ತಿದ್ದಂತೆ ಪೃಥ್ವಿ ಶಾ ವಿರುದ್ಧ ಕೇಸ್ ದಾಖಲಿಸಿದ್ದಾರೆ.
ಮಹಿಳೆಯೊಬ್ಬರ ಘನತೆಗೆ ಧಕ್ಕೆ ತಂದಿರುವುದೂ ಸೇರಿದಂತೆ ವಿವಿಧ ಕಲಂಗಳ ಅಡಿ ಪ್ರಕರಣ ದಾಖಲಿಸಲಾಗಿದ್ದು, ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ. ಈ ಮೊದಲು ಪೃಥ್ವಿ ಶಾ ನೀಡಿದ ದೂರಿನಂತೆ ಮುಂಬೈನ ಓಶೀವಾರ ಠಾಣೆ ಪೋಲಿಸರು ಸಪ್ನಾ ಗಿಲ್ ಮತ್ತಾಕೆಯ ಗೆಳೆಯ ಶೋಭಿತ್ ಠಾಕೂರ್ ಸೇರಿದಂತೆ ಒಟ್ಟು ಎಂಟು ಮಂದಿ ವಿರುದ್ಧ ಕೇಸ್ ದಾಖಲಿಸಿದ್ದು, ಜಾಮೀನು ನೀಡುವ ಪ್ರಕರಣವಾಗಿರುವುದರಿಂದ ಸಪ್ನಾ ಗಿಲ್ ಹೊರಬಂದಿದ್ದಾರೆ.
ಘಟನೆಯ ಹಿನ್ನೆಲೆ: ಕ್ರಿಕೆಟಿಗ ಪೃಥ್ವಿ ಶಾ ಹಾಗೂ ಅವರ ಗೆಳೆಯ ಮುಂಬೈನ ರೆಸ್ಟೋರೆಂಟ್ ಒಂದಕ್ಕೆ ಡಿನ್ನರ್ ಗೆ ತೆರಳಿದ್ದ ವೇಳೆ ಸಪ್ನಾ ಗಿಲ್ ಮತ್ತಾಕೆಯ ಸ್ನೇಹಿತರು ಸೆಲ್ಫಿ ತೆಗೆಸಿಕೊಳ್ಳಲು ಮುಂದಾಗಿದ್ದರು. ಆ ಬಳಿಕ ಸೆಲ್ಫಿ ತೆಗೆದುಕೊಂಡರೂ ಸಹ ಮತ್ತೆ ಮತ್ತೆ ಒತ್ತಾಯಿಸಿದಾಗ ಪೃಥ್ವಿ ಶಾ ನಿರಾಕರಿಸಿದ್ದರು. ಇದರಿಂದ ಆಕ್ರೋಶಗೊಂಡ ಅವರುಗಳು ಪೃಥ್ವಿ ಶಾ ಮತ್ತವರ ಸ್ನೇಹಿತನ ಮೇಲೆ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿತ್ತು. ಇದೀಗ ಪೃಥ್ವಿ ಶಾ ವಿರುದ್ಧ ಪ್ರತಿ ದೂರು ದಾಖಲಾಗಿದೆ.