ಸರ್ಕಾರಿ ಶಾಲೆಯ ಪ್ರಾಂಶುಪಾಲೆ ಹಾಗೂ ಶಿಕ್ಷಕಿ, ವಿದ್ಯಾರ್ಥಿಗಳು ಹಾಗೂ ಸಹೋದ್ಯೋಗಿಗಳ ಸಮ್ಮುಖದಲ್ಲೇ ಚಪ್ಪಲಿಯಲ್ಲಿ ಹೊಡೆದಾಡಿಕೊಂಡಿದ್ದು, ಬಳಿಕ ಒಬ್ಬರನ್ನೊಬ್ಬರು ನೆಲಕ್ಕೆ ದಬ್ಬಿ ಕುಸ್ತಿ ಮಾಡಿದ್ದಾರೆ.
ಇಂತಹದೊಂದು ಆಘಾತಕಾರಿ ಘಟನೆ ಬಿಹಾರದ ಪಾಟ್ನಾ ಜಿಲ್ಲೆಯ ಕೌರಿಯ ಪಂಚಾಯಿತಿ ವ್ಯಾಪ್ತಿಯಲ್ಲಿನ ಬೀಳ್ತಾ ಮಿಡಲ್ ಸ್ಕೂಲ್ ನಲ್ಲಿ ನಡೆದಿದ್ದು ಈ ಫೈಟಿಂಗ್ ದೃಶ್ಯದ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಮೊದಲಿಗೆ ಶಿಕ್ಷಕಿ ಮೇಲೆ ಕ್ಲಾಸ್ ರೂಮ್ ಒಳಗೆ ಹಲ್ಲೆ ನಡೆದಿದ್ದು, ಆಗ ಆಕೆ ತರಗತಿಯಿಂದ ಹೊರಗೆ ಬರಲು ಮುಂದಾಗಿದ್ದಾರೆ. ಮತ್ತೊಬ್ಬಾಕೆ ಕೈಯಲ್ಲಿ ಚಪ್ಪಲಿ ಹಿಡಿದು ಆಕೆಯನ್ನು ಬೆನ್ನಟ್ಟಿದ್ದು ಬಳಿಕ ತರಗತಿಯ ಹೊರಗೆ ನೆಲದ ಮೇಲೆ ಬಿದ್ದು ಕುಸ್ತಿ ಮಾಡಿದ್ದಾರೆ. ಹೀಗೆ ಫೈಟ್ ಮಾಡಿದ ಶಿಕ್ಷಕಿಯರನ್ನು ಅನಿತಾ ಕುಮಾರಿ ಹಾಗೂ ಕಾಂತಾ ಕುಮಾರಿ ಎಂದು ಗುರುತಿಸಲಾಗಿದೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳು ಘಟನೆಯನ್ನು ಖಚಿತಪಡಿಸಿದ್ದು, ಪ್ರಾಂಶುಪಾಲೆ ಹಾಗೂ ಶಿಕ್ಷಕಿಯನ್ನು ಅಮಾನತುಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಭಾವಿ ಪ್ರಜೆಗಳನ್ನು ರೂಪಿಸಬೇಕಾದ ಶಿಕ್ಷಕರೇ ಈ ರೀತಿ ಹೊಡೆದಾಡಿಕೊಂಡಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.