ಶಾಲಾ ಶುಲ್ಕ ಪಾವತಿಸಲಿಲ್ಲವೆಂದು 8 ವರ್ಷದ ಬಾಲಕಿಯನ್ನು ಪರೀಕ್ಷೆ ಬರೆಯಲು ಅವಕಾಶ ಕೊಡದ ಶಾಲೆ ವಿರುದ್ಧ ದೂರು ದಾಖಲಾಗಿದೆ. ಮುಂಬೈನ ದಾದರ್ನ ಶಾರದಾಶ್ರಮ ವಿದ್ಯಾಮಂದಿರ ಇಂಟರ್ನ್ಯಾಶನಲ್ ಶಾಲೆಯ ಪ್ರಾಂಶುಪಾಲರು ಮತ್ತು ತರಗತಿ ಶಿಕ್ಷಕರ ವಿರುದ್ಧ ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
2ನೇ ತರಗತಿಯ ವಿದ್ಯಾರ್ಥಿಯ ತಂದೆ ದೂರಿನೊಂದಿಗೆ ಪೊಲೀಸರನ್ನು ಸಂಪರ್ಕಿಸಿದ್ದರು. ಈ ಶಾಲೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಿದ ಅನೇಕ ಕ್ರಿಕೆಟಿಗರನ್ನು ಹುಟ್ಟು ಹಾಕಿದೆ. ಬುಧವಾರ ನಡೆದ ಯುನಿಟ್ ಪರೀಕ್ಷೆಗೆ ಮಗುವಿಗೆ ಹಾಜರಾಗಲು ಅವಕಾಶ ನೀಡಲಿಲ್ಲ ಎಂದು ಬಾಲಕಿಯ ತಂದೆ ಆರೋಪಿಸಿದ್ದಾರೆ.
ಬಾಲಕಿಯನ್ನ ಅವಮಾನಿಸಲು ತರಗತಿಯಲ್ಲಿ ಇತರ ವಿದ್ಯಾರ್ಥಿಗಳಿಂದ ಪ್ರತ್ಯೇಕವಾಗಿ ಕುಳಿತುಕೊಳ್ಳುವಂತೆ ಮಾಡಲಾಯಿತು ಎಂದು ತಂದೆಯ ದೂರನ್ನು ಉಲ್ಲೇಖಿಸಿ ಪೊಲೀಸ್ ಅಧಿಕಾರಿ ಹೇಳಿದರು.
ಮುಖ್ಯೋಪಾಧ್ಯಾಯಿನಿ ರಜಿತಾ ಬಾಲೆ ಮತ್ತು ತರಗತಿ ಶಿಕ್ಷಕಿ ಪ್ರಿಯಾ ಪರಬ್ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ಜುವೆನೈಲ್ ಜಸ್ಟೀಸ್ ಆಕ್ಟ್, 2015 ರ ಸೆಕ್ಷನ್ 75 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
“ಶುಲ್ಕ ಪಾವತಿಸದ ಕಾರಣ 8 ವರ್ಷದ ಬಾಲಕಿಯನ್ನು ಅವಮಾನಿಸಿ ಶಿಕ್ಷಿಸಿದ ಆರೋಪದಲ್ಲಿ ಶಾರದಾಶ್ರಮ ವಿದ್ಯಾಮಂದಿರ ಇಂಟರ್ನ್ಯಾಶನಲ್ ಸ್ಕೂಲ್ನ ಪ್ರಾಂಶುಪಾಲರು ಮತ್ತು ಶಿಕ್ಷಕನ ವಿರುದ್ಧ ದಾದರ್ ಪೊಲೀಸರು ಎಫ್ಐಆರ್ ದಾಖಲಿಸಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
ಭಾರತ ರತ್ನ ಸಚಿನ್ ತೆಂಡೂಲ್ಕರ್ ದಾದರ್ನಲ್ಲಿರುವ ಶಾರದಾಶ್ರಮ ವಿದ್ಯಾಮಂದಿರ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿ.