ಚಿಕ್ಕಮಗಳೂರು: ವಿದ್ಯಾರ್ಥಿಯಿಂದ ಲಂಚ ಪಡೆಯುತ್ತಿದ್ದ ಚಿಕ್ಕಮಗಳೂರು ಜಿಲ್ಲೆ ಬೀರೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಎಂ.ಕೆ. ಪ್ರವೀಣ್ ಕುಮಾರ್, ಪ್ರಥಮ ದರ್ಜೆ ಸಹಾಯಕ ಸದಾಶಿವಯ್ಯ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಬಿಎಸ್‌ಸಿ ಅಂತಿಮ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಯೊಬ್ಬರ ಹಾಜರಾತಿ ಕೊರತೆ ಹಿನ್ನೆಲೆಯಲ್ಲಿ ಅದನ್ನು ಸರಿದೂಗಿಸಲು ಹಣಕ್ಕೆ ಬೇಡಿಕೆ ಇಟ್ಟಿದ್ದರು. ನೊಂದ ವಿದ್ಯಾರ್ಥಿ ಅತಿಥಿ ಉಪನ್ಯಾಸಕ ಬಿ.ಟಿ. ಹರೀಶ್ ಅವರಿಗೆ ವಿಷಯ ತಿಳಿಸಿದ್ದಾರೆ.
ಹಾಜರಾತಿ ನೀಡಲು ಪ್ರಥಮ ದರ್ಜೆ ಸಹಾಯಕ ಸದಾಶಿವಯ್ಯ 10 ಸಾವಿರ ರೂಪಾಯಿಗಳನ್ನು ಫೋನ್ ಪೇ ಮೂಲಕ ಹಾಕಿಸಿಕೊಂಡಿದ್ದಾರೆ. ಪ್ರಾಚಾರ್ಯ ಎಂ.ಕೆ. ಪ್ರವೀಣ್ ಕುಮಾರ್ 5 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಅತಿಥಿ ಉಪನ್ಯಾಸಕ ಹರೀಶ್ ಈ ಕುರಿತಾಗಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದು, ಪ್ರಾಚಾರ್ಯರ ಕಚೇರಿಯಲ್ಲಿ ಹಣ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ ತಿರುಮಲೇಶ್, ಇನ್ಸ್ಪೆಕ್ಟರ್ ಗಳಾದ ಮಲ್ಲಿಕಾರ್ಜುನ, ಅನಿಲ್ ರಾಥೋಡ್ ಸಿಬ್ಬಂದಿಗಳಾದ ವಿಜಯ ಭಾಸ್ಕರ್, ಲೋಕೇಶ್, ಸವಿನಯ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.