ಇವರು ಸಾಮಾನ್ಯ ‘ಪಾನ್ ವಾಲಾ’ ಅಲ್ಲ. ಬಾಲಿವುಡ್ ಖ್ಯಾತ ನಟ-ನಟಿಯರಿಂದ ಹಿಡಿದು ದೇಶದ ಅತಿ ದೊಡ್ಡ ಉದ್ಯಮಿಗಳವರೆಗೆ ಇವರ ಪಾನ್ ಸವಿಯದವರಿಲ್ಲ. 60 ರ ದಶಕದಲ್ಲಿ ಸಣ್ಣದಾಗಿ ಆರಂಭಗೊಂಡ ಇವರ ಪಾನ್ ಶಾಪ್ ಇಂದು ವಿದೇಶದಲ್ಲೂ ಬ್ರಾಂಚ್ ತೆರೆಯುವುಷ್ಟರ ಮಟ್ಟಿಗೆ ಯಶಸ್ಸು ಗಳಿಸಿದೆ.
ದೆಹಲಿಯ ಪ್ರತಿಷ್ಟಿತ ಗ್ರೇಟರ್ ಕೈಲಾಶ್ ನಲ್ಲಿ ಮುಖ್ಯ ಪಾನ್ ಶಾಪ್ ಹೊಂದಿರುವ ಯಶ್ ಟೇಕ್ವಾನಿ, ಇಂದು ಥಾಯ್ಲೆಂಡ್ ನಲ್ಲಿ ಎರಡು ಸೇರಿದಂತೆ ಒಟ್ಟು 9 ಪಾನ್ ಶಾಪ್ ಗಳನ್ನು ಹೊಂದಿದ್ದಾರೆ. ಖ್ಯಾತ ಬಾಲಿವುಡ್ ನಟ ಅಮಿತಾಬ್ ಬಚ್ಚನ್, ಶಾರೂಕ್ ಖಾನ್, ಅಕ್ಷಯ್ ಕುಮಾರ್, ಖ್ಯಾತ ಗಾಯಕಿ ಲತಾ ಮಂಗೇಶ್ಕರ್, ಅಂಬಾನಿ ಸೇರಿದಂತೆ ಖ್ಯಾತನಾಮರೆಲ್ಲ ಇವರ ಪಾನ್ ಬೀಡಾ ಸವಿದವರ ಪಟ್ಟಿಯಲ್ಲಿದ್ದಾರೆ.
ದೇಶ ವಿಭಜನೆಯ ಸಂದರ್ಭದಲ್ಲಿ ಸಿಂಧ್ ಪ್ರಾಂತ್ಯದಿಂದ ಯಶ್ ಟೇಕ್ವಾನಿಯವರ ತಂದೆ ಭಗವಾನ್ ದಾಸ್ ದೆಹಲಿಗೆ ಬಂದಿದ್ದು, ಆರಂಭದಲ್ಲಿ ಜೀವನೋಪಾಯಕ್ಕಾಗಿ ಹಲವು ಉದ್ಯೋಗ ಮಾಡಿದ್ದಾರೆ. ಬಳಿಕ ಚಿಕ್ಕದೊಂದು ಪಾನ್ ಶಾಪ್ ತೆರೆದಿದ್ದು, ಅವರು ನೀಡುತ್ತಿದ್ದ ಸ್ವಾದಿಷ್ಟ ರುಚಿ ಹಾಗೂ ಗುಣಮಟ್ಟದ ಕಾರಣಕ್ಕೆ ಈ ಪಾನ್ ಶಾಪ್ ಬಹಳ ಬೇಗನೆ ಪ್ರಸಿದ್ದಿಗೆ ಬಂದಿದೆ.
ಯಶ್ ಟೇಕ್ವಾನಿ ಕೂಡಾ ತಂದೆಯ ವ್ಯವಹಾರದಲ್ಲಿ ಕೈ ಜೋಡಿಸಿದ್ದು, ಇಂದು ಇವರ ‘ಪ್ರಿನ್ಸ್ ಪಾನ್ ಕಾರ್ನರ್’ ಹೆಮ್ಮರವಾಗಿ ಬೆಳೆದಿದೆ. 25 ಕ್ಕೂ ಅಧಿಕ ವೆರೈಟಿಯ ಪಾನ್ ಗಳನ್ನು ಗ್ರಾಹಕರಿಗೆ ನೀಡುತ್ತಿದ್ದು, ಮಹಿಳೆಯರಿಗಾಗಿಯೇ ಕತ್ರೀನಾ, ಕರೀನಾ ಹೆಸರಿನ ಸ್ಪೆಷಲ್ ಪಾನ್ ಗಳಿವೆ. 30 ರೂ. ಗಳಿಂದ 1,100 ರೂ. ಗಳವರೆಗೆ ಪಾನ್ ಬೀಡಾ ಬೆಲೆಯಿದ್ದು, ಗ್ರಾಹಕರು ಖರೀದಿಸಲು ಮುಗಿ ಬೀಳುತ್ತಾರೆ. ಇಂದು ಐಷಾರಾಮಿ ಕಾರು, ಬಂಗಲೆ ಹೊಂದಿರುವ ಟೇಕ್ವಾನಿ ಕುಟುಂಬ, ತಮ್ಮ ಪಾನ್ ಉದ್ಯಮದ ಕುರಿತು ಹೆಮ್ಮೆ ಹೊಂದಿದ್ದಾರೆ.