ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಷಣದ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ʼಮನ್ ಕಿ ಬಾತ್ʼ ಇರಲಿ ಅಥವಾ ಚುನಾವಣಾ ಭಾಷಣವಿರಲಿ ಮೋದಿ ಭಾಷಣಕ್ಕೆ ನಿಂತ್ರೆ ಅದನ್ನು ಕೇಳಲು ಜನ ಸಾಗರವೇ ಹರಿದು ಬರುತ್ತೆ. ಭಾಷಣದಲ್ಲಿ ಪದ ಬಳಕೆ ಹಾಗೂ ವಿರೋಧಿಗಳನ್ನು ಕೆಣಕುವ ಪರಿ ಭಿನ್ನವಾಗಿರುತ್ತದೆ. ಮೋದಿ ಈ ಭಾಷಣವನ್ನು ಯಾರು ಬರೆಯುತ್ತಾರೆ…? ಎಷ್ಟು ಸಂಬಳ ಪಡೆಯುತ್ತಾರೆಂಬ ಕುತೂಹಲ ಎಲ್ಲರಿಗೂ ಇದೆ.
ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಪ್ರಧಾನಿ ಕಚೇರಿಯಿಂದ ಈ ಬಗ್ಗೆ ಮಾಹಿತಿ ಕೋರಲಾಗಿತ್ತು. ಪ್ರಧಾನಿ ಮೋದಿಯವರ ಭಾಷಣಕ್ಕೆ ಪ್ರಧಾನಿ ಕಚೇರಿ ಪ್ರತಿಕ್ರಿಯೆ ನೀಡಿದೆ. ಪ್ರಧಾನಿ ತಮ್ಮ ಭಾಷಣವನ್ನು ಸ್ವತಃ ಅಂತಿಮಗೊಳಿಸುತ್ತಾರೆ ಎಂದು ಪಿಎಂಒ ಹೇಳಿದೆ. ಪಿಎಂಗೆ ವಿವಿಧ ವ್ಯಕ್ತಿಗಳು, ಅಧಿಕಾರಿಗಳು, ಇಲಾಖೆಗಳು, ಘಟಕಗಳು, ಸಂಸ್ಥೆಗಳಿಂದ ಮಾಹಿತಿ ನೀಡಲಾಗುತ್ತದೆ. ಈ ಮಾಹಿತಿಯ ಆಧಾರದ ಮೇಲೆ ಪ್ರಧಾನಿ ಸ್ವತಃ ಭಾಷಣವನ್ನು ಅಂತಿಮಗೊಳಿಸುತ್ತಾರೆ.
ಪ್ರಧಾನಮಂತ್ರಿಯವರ ಭಾಷಣವನ್ನು ಬರೆಯಲು ತಂಡವಿದೆಯೇ…? ತಂಡದಲ್ಲಿ ಎಷ್ಟು ಸದಸ್ಯರಿದ್ದಾರೆ…? ಎಷ್ಟು ಸಂಬಳ ನೀಡಲಾಗುತ್ತದೆ…? ಎಂದು ಪ್ರಶ್ನೆ ಕೇಳಲಾಗಿತ್ತು. ಆದ್ರೆ ಪಿಎಂಒ ಈ ಪ್ರಶ್ನೆಗಳಿಗೆ ಉತ್ತರಿಸಿಲ್ಲ. 2014 ರ ಚುನಾವಣೆಯಲ್ಲಿ ಬಿಜೆಪಿಯ ಭರ್ಜರಿ ಗೆಲುವಿಗೆ ಮೋದಿ ಭಾಷಣ ಮುಖ್ಯ ಪಾತ್ರವಹಿಸಿತ್ತು.
ಮೋದಿಯವರ ಅತಿದೊಡ್ಡ ಮತ್ತು ಅಸಾಧಾರಣ ವಿಷಯವೆಂದರೆ ಅವರ ಭಾಷಣ ಕಲೆ. ಭಾಷಣದ ಮೂಲಕ ಪ್ರೇಕ್ಷಕರನ್ನು ಹೇಗೆ ಮಂತ್ರಮುಗ್ಧಗೊಳಿಸಬೇಕು ಎಂಬುದು ಮೋದಿಗೆ ತಿಳಿದಿದೆ. ಅಭಿವೃದ್ಧಿ ಮತ್ತು ಇತರ ವಿಷಯಗಳ ಬಗ್ಗೆ ಯಾವುದೇ ಸಿದ್ಧತೆಯಿಲ್ಲದೆ ಭಾಷಣ ಮಾಡುವ ಅವರು ಇತರ ನಾಯಕರಂತೆ ಲಿಖಿತ ಭಾಷಣವನ್ನು ಓದುವುದಿಲ್ಲ. ಸರಳ ಮಾತಿನೊಂದಿಗೆ ಪ್ರೇಕ್ಷಕರನ್ನು ಸೆಳೆಯುತ್ತಾರೆ. ಪಕ್ಷ, ಮಂತ್ರಿಗಳು, ವಿಷಯ ತಜ್ಞರಿಂದ ಭಾಷಣಕ್ಕೆ ಮಾಹಿತಿಯನ್ನು ಸಂಗ್ರಹಿಸಿ ನಂತರ ಅದನ್ನು ಅಂತಿಮಗೊಳಿಸಲಾಗುತ್ತದೆ. ಸಮರ್ಥ ಭಾಷಣಕಾರರಾಗಿದ್ದ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ ಕೂಡ ತಾವೇ ಭಾಷಣಗಳನ್ನು ಸಿದ್ಧಪಡಿಸುತ್ತಿದ್ದರು.