ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 19 ರಂದು ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿದ್ದು, ಅಲ್ಲಿ ಹಲವಾರು ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.
ಬಹುಮುಖ್ಯವಾಗಿ ಪ್ರಧಾನಿ ಮೋದಿ ಅವರು ಸಂಭಾಲ್ ಜಿಲ್ಲೆಯಲ್ಲಿರುವ ಶ್ರೀ ಕಲ್ಕಿ ಧಾಮ್ ದೇವಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅಧ್ಯಕ್ಷ ಆಚಾರ್ಯ ಪ್ರಮೋದ್ ಕೃಷ್ಣಂ ನೇತೃತ್ವದ ಶ್ರೀ ಕಲ್ಕಿ ಧಾಮ್ ನಿರ್ಮಾಣ್ ಟ್ರಸ್ಟ್ ನ ಆಶ್ರಯದಲ್ಲಿ ನಿರ್ಮಿಸಲಾಗುತ್ತಿರುವ ಈ ದೇವಾಲಯವು ಅಪಾರ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ.
ಪ್ರಧಾನಿ ಮೋದಿ ದೇವಾಲಯದ ಮಾದರಿಯನ್ನು ಅನಾವರಣಗೊಳಿಸಿ ನಂತರ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ, ಇದರಲ್ಲಿ ಪ್ರಮುಖ ಸಂತರು, ಧಾರ್ಮಿಕ ಮುಖಂಡರು ಮತ್ತು ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ.
ಉತ್ತರ ಪ್ರದೇಶದ ಸಂಭಾಲ್’ನಲ್ಲಿ ಭಗವಾನ್ ವಿಷ್ಣುವಿನ 10 ನೇ ಅವತಾರವಾದ ಭಗವಾನ್ ಕಲ್ಕಿಯ ದೇವಾಲಯವನ್ನು ನಿರ್ಮಿಸಲಾಗುತ್ತಿದೆ.ಸಂಭಾಲ್’ನ ಅಂಚೋದ ಕಾಂಬೋದಲ್ಲಿ ನಿರ್ಮಿಸಲಾಗುತ್ತಿರುವ ಕಲ್ಕಿ ಧಾಮದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಬಹುತೇಕ ಸಿದ್ಧತೆಗಳು ಪೂರ್ಣಗೊಂಡಿವೆ. ಅಯೋಧ್ಯೆಯ ಸೋಮನಾಥ ದೇವಾಲಯ ಮತ್ತು ರಾಮಮಂದಿರವನ್ನು ನಿರ್ಮಿಸಿದ ಅದೇ ಗುಲಾಬಿ ಬಣ್ಣದ ಕಲ್ಲಿನಿಂದ ಕಲ್ಕಿ ಧಾಮವನ್ನು ನಿರ್ಮಿಸಲಾಗುತ್ತಿದೆ. ಈ ದೇವಾಲಯದ ಗೋಪುರವು 108 ಅಡಿ ಎತ್ತರವಿರುತ್ತದೆ.