ನವದೆಹಲಿ: ದೇಶಾದ್ಯಂತ 77ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಮನೆ ಮಾಡಿದೆ. ಐತಿಹಾಸಿಕ ಕೆಂಪು ಕೋಟೆ ಮೇಲೆ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ನೆರವೇರಿಸಿ ದಾಖಲೆ ನಿರ್ಮಿಸಿದ್ದಾರೆ.
ಸತತ 10ನೇ ಬಾರಿಗೆ ಕೆಂಪುಕೋಟೆ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ದಾಖಲೆ ಸರಿಗಟಿದ್ದಾರೆ. ಅತಿ ಹೆಚ್ಚು ಬಾರಿ ಧ್ವಜಾರೋಹಣ ನೆರವೇರಿಸಿದ ಮೂರನೇ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ.
ಭಾರತ ಇದುವರೆಗೆ 15 ಪ್ರಧಾನಿಗಳನ್ನು ಕಂಡಿದ್ದು, 13 ಮಂದಿ ಕೆಂಪು ಕೋಟೆಯಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿದ್ದಾರೆ. ಗುಲ್ಜರಿಲಾಲ್ ನಂದಾ ಮತ್ತು ಚಂದ್ರಶೇಖರ್ ಅವರಿಗೆ ಧ್ವಜ ಹಾರಿಸುವ ಅವಕಾಶ ಸಿಗಲಿಲ್ಲ.
ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಸತತ 17 ಬಾರಿ ರಾಷ್ಟ್ರಧ್ವಜಾರೋಹಣ ಮಾಡಿದ್ದಾರೆ. ಅತಿ ಹೆಚ್ಚು ಬಾರಿ ರಾಷ್ಟ್ರಧ್ವಜ ಹಾರಿಸಿದ ದಾಖಲೆ ನೆಹರು ಹೆಸರಿನಲ್ಲಿದೆ. ಆಗಸ್ಟ್ 15, 1947 ರಂದು ಮೊದಲ ಬಾರಿಗೆ ತ್ರಿವರ್ಣ ಧ್ವಜ ಹಾರಿಸಿದ ನೆಹರು ಮೇ 27, 1964 ರಲ್ಲಿ 17ನೇ ಬಾರಿಗೆ ರಾಷ್ಟ್ರಧ್ವಜ ಹಾರಿಸಿದ್ದಾರೆ.
ಇಂದಿರಾಗಾಂಧಿ 16 ಬಾರಿ ರಾಷ್ಟ್ರಧ್ವಜಾರೋಹಣ ಮಾಡಿದ್ದಾರೆ. ಆದರೆ, ಅವರು ನಿರಂತರವಾಗಿ ಧ್ವಜಾರೋಹಣ ಮಾಡಿಲ್ಲ. ಜನವರಿ 24, 1966 ರಿಂದ ಮಾರ್ಚ್ 24, 1977 ರವರೆಗೆ ಸತತ 11 ಬಾರಿ ರಾಷ್ಟ್ರಧ್ವಜಾರೋಹಣ ಮಾಡಿದ ಇಂದಿರಾ ಗಾಂಧಿ, ಜನವರಿ 14, 1980 ಮತ್ತು ಅಕ್ಟೋಬರ್ 31, 1984ರ ನಡುವಿನ ಅವಧಿಯಲ್ಲಿ ಸತತ 5 ಬಾರಿ ಧ್ವಜಾರೋಹಣ ನೆರವೇರಿಸಿದ್ದಾರೆ.
ಮನಮೋಹನ್ ಸಿಂಗ್ ಮತ್ತು ಮೋದಿ ಸತತ 10 ಬಾರಿ ಧ್ವಜಾರೋಹಣ ಮಾಡಿದ್ದಾರೆ.