ಪ್ರಧಾನಿ ನರೇಂದ್ರ ಮೋದಿ ದೇಶದ ದಿಗ್ಗಜ ರಾಜಕಾರಣಿ ಮಾತ್ರವಲ್ಲ ತಮ್ಮ ಫಿಟ್ನೆಸ್‌ನಿಂದಲೂ ಕೋಟ್ಯಂತರ ಜನರ ಗಮನ ಸೆಳೆದಿದ್ದಾರೆ. 73ರ ಹರೆಯದಲ್ಲೂ ನರೇಂದ್ರ ಮೋದಿ ಬಹಳ ಫಿಟ್ ಆಗಿದ್ದಾರೆ. ಒಂದೇ ಒಂದು ದಿನವೂ ಕರ್ತವ್ಯದಿಂದ ರಜೆ ತೆಗೆದುಕೊಂಡಿಲ್ಲ. ದೇಶ-ವಿದೇಶಗಳುದ್ದಕ್ಕೂ ಸಾವಿರಾರು ಕಿಲೋಮೀಟರ್ ಪ್ರಯಾಣಿಸುತ್ತಾರೆ.
ಚುನಾವಣಾ ಪ್ರಚಾರವಾಗಲಿ, ಯೋಜನೆಗಳ ಉದ್ಘಾಟನೆಯಾಗಲಿ ಪ್ರತಿಯೊಂದರಲ್ಲೂ ತ್ವರಿತ ಮತ್ತು ಚುರುಕಾಗಿ ಕೆಲಸ ಮಾಡುತ್ತಾರೆ. ಅವರ ಸಾಮರ್ಥ್ಯವು ವಿಶ್ವದ ಅನೇಕ ರಾಜಕಾರಣಿಗಳಿಗಿಂತ ಭಿನ್ನವಾಗಿದೆ. ಪ್ರಧಾನಿ ಮೋದಿ ತಮ್ಮ ಫಿಟ್ನೆಸ್ ಅನ್ನು ಹೇಗೆ ಕಾಪಾಡಿಕೊಳ್ತಾರೆ ಅನ್ನೋದನ್ನು ನೋಡೋಣ.
ಯೋಗಾಸನ – ಪ್ರಧಾನಮಂತ್ರಿ ನರೇಂದ್ರ ಮೋದಿ ನಿಯಮಿತವಾಗಿ ಯೋಗಾಸನ ಮಾಡುತ್ತಾರೆ. ಯೋಗವು ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕ ಆರೋಗ್ಯಕ್ಕೂ ಪ್ರಯೋಜನಕಾರಿ ಎಂಬುದನ್ನು ಯಾವಾಗಲೂ ಖಚಿತಪಡಿಸುತ್ತಾರೆ. ಅವರು ಅನೇಕ ರೀತಿಯ ಆಸನಗಳನ್ನು ಮಾಡುತ್ತಾರೆ, ಅವುಗಳಲ್ಲಿ ಪ್ರಮುಖವಾದವೆಂದರೆ ಸೂರ್ಯ ನಮಸ್ಕಾರ ಮತ್ತು ಪ್ರಾಣಾಯಾಮ. ಇದು ಅವರ ಉತ್ತಮ ಆರೋಗ್ಯಕ್ಕೆ ಮುಖ್ಯ ಕಾರಣವಾಗಿದೆ.
ಪ್ರಧಾನಿ ಮೋದಿ ಏನು ತಿನ್ನುತ್ತಾರೆ ?
ದೇಹ ಮತ್ತು ಮನಸ್ಸನ್ನು ಫಿಟ್ ಆಗಿಟ್ಟುಕೊಳ್ಳಲು ದೈಹಿಕ ವ್ಯಾಯಾಮದ ಜೊತೆಗೆ ಆರೋಗ್ಯಕರ ಆಹಾರವೂ ಮುಖ್ಯವಾಗಿದೆ. ಪ್ರಧಾನಿ ಮೋದಿಯವರು ಇದನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಅದಕ್ಕಾಗಿಯೇ ಅವರು ಕಟ್ಟುನಿಟ್ಟಾದ ಆಹಾರಕ್ರಮವನ್ನು ಅನುಸರಿಸುತ್ತಾರೆ. ಮೋದಿ ಗುಜರಾತಿ ಆಹಾರವನ್ನು ತಿನ್ನುತ್ತಾರೆ. ಖಿಚಡಿ ಅವರ ನೆಚ್ಚಿನ ಭಕ್ಷ್ಯ.
ನಮೋ ಶುದ್ಧ ಸಸ್ಯಾಹಾರಿ. ಅವರು ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನಲು ಇಷ್ಟಪಡುತ್ತಾರೆ. ಪ್ರತಿ ಮೀಲ್ ಜೊತೆಗೂ ಒಂದು ಲೋಟ ಮೊಸರು ಸೇವಿಸ್ತಾರೆ. ಇದಲ್ಲದೆ ಹಿಮಾಚಲ ಪ್ರದೇಶದ ಪರೋಟ ಮತ್ತು ಅಣಬೆಗಳು ಅವರ ಫೇವರಿಟ್. ಮೋದಿ ಸದಾ ಬೆಳಗ್ಗೆ 9 ಗಂಟೆಗೆ ಮುಂಚಿತವಾಗಿ ಉಪಾಹಾರವನ್ನು ತಿನ್ನುತ್ತಾರೆ.
PM ಉಪವಾಸ ಮಾಡುತ್ತಾರೆಯೇ ?
ಪ್ರಧಾನಿ ನರೇಂದ್ರ ಮೋದಿ ಉಪವಾಸದಲ್ಲಿ ನಂಬಿಕೆ ಹೊಂದಿದ್ದಾರೆ. 35 ವರ್ಷಗಳಿಂದ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಅವರು ಉಪವಾಸ ಮಾಡುತ್ತಿದ್ದಾರೆ. ಪ್ರಧಾನಿಯಾದ ಬಳಿಕ 2014ರಲ್ಲಿ ಅಮೆರಿಕಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಉಪವಾಸ ಕೈಬಿಟ್ಟಿರಲಿಲ್ಲ. ಅಲ್ಲಿ ಕೇವಲ ನಿಂಬೆ ನೀರನ್ನು ಮಾತ್ರ ಸೇವಿಸಿದ್ದರು. ಎರಡು ದಿನಗಳ ಕಾಲ ಉಪವಾಸ ಮಾಡಲು ಅವರು ಉಗುರು ಬೆಚ್ಚಗಿನ ನೀರನ್ನು ಮಾತ್ರ ಕುಡಿಯುತ್ತಾರಂತೆ. ಈ ರೀತಿ ಅತ್ಯಂತ ಆರೋಗ್ಯಕರ ಆಹಾರ ಸೇವನೆ ಮತ್ತು ನಿಯಮಿತ ವ್ಯಾಯಾಮದ ಜೊತೆಗೆ ಆಗಾಗ ಉಪವಾಸವನ್ನೂ ಮಾಡುವ ಮೂಲಕ ಮೋದಿ ಸಿಕ್ಕಾಪಟ್ಟೆ ಫಿಟ್ ಆಗಿದ್ದಾರೆ.