ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಆಯ್ಕೆಯಾಗಿರುವ ಶೆಹಬಾಜ್ ಷರೀಫ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.
ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ನೇತೃತ್ವದ ಆರು ಪಕ್ಷಗಳ ಮೈತ್ರಿಕೂಟದ ಅಭ್ಯರ್ಥಿ ಶೆಹಬಾಜ್ ಅವರು ಪಾಕಿಸ್ತಾನದ 24 ನೇ ಪ್ರಧಾನಿಯಾಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು.
ಶೆಹಬಾಜ್ ಷರೀಫ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. “ಪಾಕಿಸ್ತಾನದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಶೆಹಬಾಜ್ ಷರೀಫ್ ಅವರಿಗೆ ಅಭಿನಂದನೆಗಳು” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಶೆಹಬಾಜ್ ಅವರ ಹಿರಿಯ ಸಹೋದರ ನವಾಜ್ ಷರೀಫ್, ಮರಿಯಮ್ ನವಾಜ್ ಮತ್ತು ಇತರ ಪಿಎಂಎಲ್-ಎನ್ ಕಾರ್ಯಕರ್ತರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಪಿಪಿಪಿ ಹೊರತುಪಡಿಸಿ, ಶೆಹಬಾಜ್ ಅವರನ್ನು ಮುತ್ತಹಿದಾ ಕ್ವಾಮಿ ಮೂವ್ಮೆಂಟ್ (ಎಂಕ್ಯೂಎಂ-ಪಿ), ಪಾಕಿಸ್ತಾನ್ ಮುಸ್ಲಿಂ ಲೀಗ್ (ಕ್ಯೂ), ಬಲೂಚಿಸ್ತಾನ್ ಅವಾಮಿ ಪಾರ್ಟಿ, ಪಾಕಿಸ್ತಾನ್ ಮುಸ್ಲಿಂ ಲೀಗ್ (ಝಡ್), ಇಸ್ಟೆಕಾಮ್-ಇ-ಪಾಕಿಸ್ತಾನ್ ಪಾರ್ಟಿ ಮತ್ತು ನ್ಯಾಷನಲ್ ಪಾರ್ಟಿ ಬೆಂಬಲಿಸಿದ್ದವು.