ಭೋಪಾಲ್: ಜಾಗತಿಕ ಕಾಲಮಾಪನ ಕೇಂದ್ರವನ್ನು ಇಂಗ್ಲೆಂಡ್ ನ ಗ್ರೀನ್ ವಿಚ್ ನಿಂದ ಮಧ್ಯಪ್ರದೇಶದ ಉಜ್ಜಯಿನಿಗೆ ಬದಲಿಸಲು ಪ್ರಯತ್ನ ನಡೆಸುವುದಾಗಿ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಮಹತ್ವದ ಘೋಷಣೆ ಮಾಡಿದ್ದಾರೆ.
ಮಧ್ಯಪ್ರದೇಶ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಭಾರತೀಯ ಸಮಯದ ಬಗ್ಗೆ 300 ವರ್ಷಗಳ ಹಿಂದೆಯೇ ಜಗತ್ತಿಗೆ ಗೊತ್ತಿತ್ತು. ನಂತರ ಪ್ಯಾರಿಸ್ ನಲ್ಲಿ ಸಮಯಮಾಪನ ನಿರ್ಧರಿಸಲು ಯತ್ನಿಸಿ ಅದೇ ಮಾದರಿಯನ್ನು ಅನುಸರಿಸಿದ ಬ್ರಿಟನ್ ಗ್ರೀನ್ ವಿಚ್ ನಗರವನ್ನು ಮಾಪನದ ಕೇಂದ್ರ, ರೇಖಾಂಶವಾಗಿ ಗುರುತಿಸಲಾಯಿತು ಎಂದು ಹೇಳಿದ್ದಾರೆ.
ಗ್ರೀನ್ ವಿಚ್ ಸಮಯ ಪ್ರಕಾರ ಮಧ್ಯರಾತ್ರಿ 12 ಗಂಟೆಗೆ ದಿನದ ಆರಂಭ ಸೂಚಿಸಲಾಗುತ್ತದೆ. ಮಧ್ಯರಾತ್ರಿ ಯಾರು ದಿನ ಆರಂಭಿಸುತ್ತಾರೆ. ಸೂರ್ಯೋದಯದ ಹೊತ್ತಿಗೆ ಅಥವಾ ಸೂರ್ಯೋದಯದ ನಂತರ ಜನ ಏಳುತ್ತಾರೆ. ನಮ್ಮ ಸರ್ಕಾರ ಜಾಗತಿಕ ರೇಖಾಂಶ ಕೇಂದ್ರವನ್ನಾಗಿ ಉಜ್ಜಯಿನಿಯನ್ನೇ ಪರಿಗಣಿಸಲು ಪ್ರಯತ್ನ ನಡೆಸುತ್ತದೆ. ಹೀಗಾಗಿ ಇಂಡಿಯನ್ ಸ್ಟ್ಯಾಂಡರ್ಡ್ ಟೈಮ್ ಅನ್ನೇ ಜಗತ್ತು ಅಳವಡಿಸಿಕೊಳ್ಳಬೇಕು ಎಂದು ಪ್ರತಿಪಾದಿಸಿದ್ದಾರೆ.
ಭಾರತೀಯ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಉಜ್ಜಯಿನಿ ಭಾರತೀಯ ಕಾಲಮಾನದ ಕೇಂದ್ರ ಬಿಂದುವಾಗಿತ್ತು. ಉಜ್ಜಯಿನಿಯಿಂದಲೇ ವಿವಿಧ ಸಮಯಗಳನ್ನು ನಿರ್ಧರಿಸಲಾಗುತ್ತಿತ್ತು. 300 ವರ್ಷಗಳ ಹಿಂದೆ ಭಾರತದ ಸ್ಟಾಂಡರ್ಡ್ ಟೈಮ್ ಅನ್ನು ವಿಶ್ವ ಪರಿಗಣಿಸುತ್ತಿತ್ತು. ಉಜ್ಜೈನಿಯಲ್ಲಿ ಪ್ರಧಾನ ಮದ್ಯ ರೇಖೆ ಇದೆ. ಹಿಂದೂ ಪಂಚಾಂಗಕ್ಕೆ ಇದೇ ಆಧಾರವಾಗಿದೆ. ಉಜ್ಜೈನಿಯ ಸಮಯ ನಿರ್ಧರಿಸುವ ಪುರಾತನ ಯಂತ್ರದ ಪುನರುತ್ಥಾನ ಮಾಡಿ ಜಗತ್ತಿನ ಸಮಯವನ್ನು ಪುನಾರಚನೆ ಮಾಡಲಾಗುವುದು. ಈ ಮೂಲಕ ವಿಶ್ವವೇ ಭಾರತದ ಸಮಯವನ್ನು ಪಾಲಿಸುವಂತೆ ಮಾಡಲಾಗುವುದು ಎಂದು ಮೋಹನ್ ಯಾದವ್ ಹೇಳಿದ್ದಾರೆ.