ಬೆಂಗಳೂರು: ಜಾತಕ ದೋಷ ನಿವಾರಿಸುವುದಾಗಿ ನಂಬಿಸಿ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಹಾಸನ ಜಿಲ್ಲೆಯ ಪುರದಮ್ಮ ದೇವಾಲಯದ ಪೂಜಾರಿ ದಯಾನಂದನನ್ನು ಬಂಧಿಸಲಾಗಿದೆ.
ಬಾಗಲಗುಂಟೆ ಸಮೀಪ ನೆಲೆಸಿರುವ ಸಂತ್ರಸ್ತೆಯನ್ನು ಪೂಜಾರಿ ಲೈಂಗಿಕವಾಗಿ ಶೋಷಿಸಿದ್ದ. ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಬಾಗಲಗುಂಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಹಾಸನದ ಪುರದಮ್ಮ ದೇವಾಲಯ ಶಕ್ತಿ ದೇವತೆಯಾಗಿದ್ದು, ಅನೇಕ ವರ್ಷಗಳಿಂದ ದಯಾನಂದ ಇಲ್ಲಿ ಪೂಜಾರಿಯಾಗಿದ್ದಾರೆ. ದೇವರ ಹೆಸರು ಬಳಸಿಕೊಂಡು ಮಾಟ ಮಂತ್ರ, ವಶೀಕರಣ ಹೀಗೆ ಅನಾಚಾರಗಳಲ್ಲಿ ತೊಡಗಿದ್ದ ಆರೋಪ ಈತನ ಮೇಲಿದೆ. ದೇವಾಲಯದ ಹೆಸರಿನಲ್ಲಿ ಸಂಪಾದಿಸಿದ ಹಣದಲ್ಲಿ ವೈಭೋಗದ ಜೀವನ ನಡೆಸುತ್ತಿದ್ದ ದಯಾನಂದ ಮೈತುಂಬ ಚಿನ್ನಾಭರಣ ಧರಿಸಿ ಐಷಾರಾಮಿ ಕಾರುಗಳಲ್ಲಿ ಓಡಾಡುತ್ತಿದ್ದ. ಶೋಕಿಲಾಲನಾಗಿದ್ದ ಈತ ತನ್ನ ಶ್ರೀಮಂತ ಜೀವನದ ಶೈಲಿಯ ವಿಡಿಯೋ ಮಾಡಿ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದ.
ಅರಸಿಕೆರೆ ಮೂಲದ ಸಂತ್ರಸ್ತೆ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಬಾಗಲಗುಂಟೆ ಸಮೀಪದ ಪಿಜಿಯಲ್ಲಿ ನೆಲೆಸಿದ್ದಾರೆ. ಪುರದಮ್ಮ ದೇವರ ಭಕ್ತೆಯಾಗಿರುವ ಸಂತ್ರಸ್ತೆ ದಯಾನಂದನ ಭೇಟಿಯಾಗಿದ್ದರು. ಹಸ್ತ ರೇಖೆ ನೋಡಿ ಜಾತಕದಲ್ಲಿ ದೋಷವಿದೆ. ದೋಷ ನಿವಾರಣೆಗೆ ವಿಶೇಷ ಪೂಜೆ ಮಾಡಬೇಕಿದೆ ಎಂದು ಹೇಳಿದ್ದು, ಆತನನ್ನು ನಂಬಿದ ಯುವತಿ 10,000 ರೂ. ಕೊಟ್ಟಿದ್ದಳು.
ಮೇ 24ರಂದು ಸಂತ್ರಸ್ತೆಗೆ ಕರೆ ಮಾಡಿ ಹೆಚ್ಎಸ್ಆರ್ ಲೇಔಟ್ ನಲ್ಲಿ ಪರಿಚಿತರ ಮನೆಯಲ್ಲಿ ದೇವಿಯ ಪೂಜೆಗೆ ಬರುವಂತೆ ಕಾರ್ ನಲ್ಲಿ ಕರೆದುಕೊಂಡು ಹೋಗಿ ಕಾರ್ ನಲ್ಲೇ ಅತ್ಯಾಚಾರ ಎಸಗಿದ್ದಾನೆ. ಯಾರಿಗಾದರೂ ಹೇಳಿದರೆ ಮಾರ್ಫ್ ಮಾಡಿದ ಫೋಟೋಗಳನ್ನು ಜಾಲತಾಣದಲ್ಲಿ ಹರಿಬಿಟ್ಟು ಮರ್ಯಾದೆ ತೆಗೆಯುವುದಾಗಿ ಬೆದರಿಸಿದ್ದಾನೆ. ಬ್ಲಾಕ್ ಮೇಲ್ ಮಾಡಿ 40,000 ರೂ. ಸುಲಿಗೆ ಮಾಡಿದ್ದ. ನಂತರ ಹೋಟೆಲ್ ಗೆ ಕರೆದೊಯ್ದು ಲೈಂಗಿಕವಾಗಿ ಶೋಷಣೆ ಮಾಡಿದ್ದ ಎಂದು ಸಂತ್ರಸ್ತೆ ದೂರು ನೀಡುತ್ತಾರೆ. ಮೊಬೈಲ್ ಕರೆಗಳ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ.