ದಾವಣಗೆರೆ: ಭತ್ತ ಬೆಳೆಯುವುದು ನಷ್ಟ ಎಂದುಕೊಂಡಿದ್ದ ರೈತರು ಭತ್ತ ಬೆಳೆಯುವುದನ್ನೇ ನಿಲ್ಲಿಸಿದ್ದರು. ಆದರೆ ಭತ್ತದ ದರ ಏರಿಕೆ ಕಂಡಿರುವುದರಿಂದ ಮತ್ತೆ ಭತ್ತ ಬೆಳೆಯಲು ರೈತರು ಮುಂದಾಗಿದ್ದಾರೆ.
ಭದ್ರಾ ಜಲಾಶಯದಿಂದ ದಾವಣಗೆರೆ ಭಾಗದ ಅಚ್ಚುಕಟ್ಟು ಪ್ರದೇಶಕ್ಕೆ ಬೇಸಿಗೆ ಬೆಳೆಗೆ ನೀರು ಸಿಗುವುದು ಅನುಮಾನವಾಗಿದೆ. ರೈತರು ಕೊಳವೆಬಾವಿ, ನದಿ ಪಾತ್ರದ ಪಂಪ್ಸೆಟ್ ಗಳ ಆಶ್ರಯದಲ್ಲಿ ಭತ್ತ ಬೆಳೆಯಲು ಮುಂದಾಗಿದ್ದಾರೆ.
ಕಳೆದ 8-10 ವರ್ಷಗಳಿಂದ ಭತ್ತಕ್ಕೆ ದರ ಇಲ್ಲದೆ ಅನೇಕ ರೈತರು ಭತ್ತ ಬೆಳೆಯುವುದನ್ನು ನಿಲ್ಲಿಸಿ ಪರ್ಯಾಯ ಬೆಳೆಯಲು ಮುಂದಾಗಿದ್ದರು. ಈ ಬಾರಿ ಭತ್ತಕ್ಕೆ ಹೆಚ್ಚಿನ ದರ ಬಂದಿದೆ. ಒಂದು ಕ್ವಿಂಟಲ್ ಗೆ 1,500 ರಿಂದ 1,800 ಇದ್ದ ದರ 1400 ರೂ. ಏರಿಕೆ ಕಂಡಿದೆ. ಆರ್.ಎನ್.ಆರ್. ತಳಿಯ ಭತ್ತ ಕ್ವಿಂಟಲ್ ಗೆ 2390 – 2990 ರೂಪಾಯಿ ದರ ಇದೆ. ಶ್ರೀರಾಮ ಸೋನಾ ಭತ್ತಕ್ಕೆ 3800 ದರ ಇದೆ. ಇದರಿಂದಾಗಿ ರೈತರು ಖುಷಿಯಾಗಿದ್ದಾರೆ.
ಅಚ್ಚುಕಟ್ಟು ಪ್ರದೇಶಕ್ಕೆ ನಾಲೆಯಲ್ಲಿ ನೀರು ಹರಿಸದಿದ್ದರೂ ರೈತರು ಬೋರ್ವೆಲ್, ನದಿ ಪಾತ್ರ, ಪಿಕಪ್ ಡ್ಯಾಂಗಳ ಪಂಪ್ಸೆಟ್ ನೀರು ಬಳಸಿಕೊಂಡು ಭತ್ತ ಬೆಳೆಯಲು ಮುಂದಾಗಿದ್ದಾರೆ.