ಬೆಂಗಳೂರು: ದಸರಾ ಹಬ್ಬಕ್ಕೆ ಸಜ್ಜಾಗುತ್ತಿರುವ ಹೊತ್ತಲ್ಲೇ ಜನಸಾಮಾನ್ಯರಿಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಿಸಿ ತಟ್ಟಿದೆ. ನವರಾತ್ರಿ, ದಸರಾ ಸಂದರ್ಭದಲ್ಲಿ ಮನೆಗಳಲ್ಲಿ ವಿಶೇಷ ಖಾದ್ಯ ಸಿದ್ಧಪಡಿಸಲಾಗುತ್ತದೆ. ಆದರೆ, ಅಡುಗೆ ಎಣ್ಣೆ, ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿರುವುದು ಜನಸಾಮಾನ್ಯರಿಗೆ ಹೊರೆಯಾಗಿ ಪರಿಣಮಿಸಿದೆ.
ಅಡುಗೆ ಎಣ್ಣೆ ದರ ಲೀಟರ್ ಗೆ 30 ರೂಪಾಯಿವರೆಗೆ ಏರಿಕೆಯಾಗಿದೆ. ಲೀಟರ್ ಗೆ 100 ರೂ. ಇದ್ದ ಅಡುಗೆ ಎಣ್ಣೆ ದರ 130 ರೂ.ಗೆ ಏರಿಕೆಯಾಗಿದೆ. ಮುಕ್ತ ಮಾರುಕಟ್ಟೆಯಲ್ಲಿ 140 -150 ರೂಪಾಯಿಗೆ ಮಾರಾಟವಾಗುತ್ತಿದೆ. 95 ರೂ. ಇದ್ದ ಪಾಮ್ ಆಯಿಲ್ ದರ 120 ರೂ.ಗೆ ಏರಿಕೆಯಾಗಿದೆ.
ಹುಬ್ಬಳ್ಳಿ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಗೋಧಿ ದರ ಕ್ವಿಂಟಲ್ ಗೆ 3400 ರೂ ನಿಂದ 3,600 ರೂ. ವರೆಗೆ ಏರಿಕೆಯಾಗಿದೆ. ಕ್ವಿಂಟಲ್ ಗೋಧಿ ಹಿಟ್ಟಿನ ದರ 3300 ರೂ.ನಿಂದ 4000 ರೂ.ಗೆ ಏರಿಕೆಯಾಗಿದೆ. ಮೈದಾ ದರ 3600 ನಿಂದ 3600 ರೂ., ಹೆಸರು ಕಾಳು 8000 ರೂ. ನಿಂದ 8,300ರೂ.ಗೆ ಏರಿಕೆಯಾಗಿದೆ.
ಇದೇ ರೀತಿ ಅವಲಕ್ಕಿ, ಕೇಸರಿ ರವಾ, ಬಾಂಬೆ ರವಾ ದರಗಳು ಏರಿಕೆ ಕಂಡಿದೆ. ಸಗಟು ಮಾರುಕಟ್ಟೆಯಲ್ಲಿ ಗೋಧಿ ದರ ಕೆಜಿಗೆ 35 ರೂ., ಮುಕ್ತ ಮಾರುಕಟ್ಟೆಯಲ್ಲಿ 42 ರೂ.ಗೆ ಮಾರಾಟವಾಗುತ್ತಿದೆ. ಡ್ರೈ ಫ್ರೂಟ್ಸ್ ದರ ಕೂಡ ಹೆಚ್ಚಾಗಿದ್ದು, ಗೋಡಂಬಿ ದರ ಕೆಜಿಗೆ 1000ರೂ. ಗೆ ತಲುಪಿದೆ. ಬಾದಾಮಿ ದರ ಕೆಜಿಗೆ 850 ರೂಪಾಯಿಗೆ ತಲುಪಿದೆ. ಬೆಳ್ಳುಳ್ಳಿ ದರ 280ರೂ. ಇದ್ದು, ಟೊಮೆಟೊ, ಈರುಳ್ಳಿ ದರ 40 ರೂಪಾಯಿಗಿಂತಲೂ ಹೆಚ್ಚಾಗಿದೆ. ಅಕ್ಕಿ, ತೊಗರಿಬೇಳೆ, ಉದ್ದಿನಬೇಳೆ, ಬಟಾಣಿ, ಹೆಸರು ಬೇಳೆ ದರ ಏರಿಕೆಯಾಗಿಲ್ಲ.