ಬೆಂಗಳೂರು: ಚಿಲ್ಲರೆ ಮಾರುಕಟ್ಟೆಯಲ್ಲಿ ಏರುಗತಿಯಲ್ಲಿ ಸಾಗಿದ್ದ ಬೆಳ್ಳುಳ್ಳಿ ದರ ಇಳಿಕೆಯಾಗತೊಡಗಿದೆ.. ಮಧ್ಯಪ್ರದೇಶದಿಂದ ಆವಕ ಹೆಚ್ಚಳವಾಗಿದ್ದು, ಸಗಟು ದರದಲ್ಲಿ ಇಳಿಕೆ ಕಂಡು ಬಂದಿದೆ.
ಕಳೆದ ಡಿಸೆಂಬರ್ ಎರಡನೇ ವಾರದಲ್ಲಿ ರಾಜ್ಯದ ವಿವಿಧ ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ದರ ಭಾರಿ ಏರಿಕೆ ಕಂಡಿತ್ತು. ನಾಟಿ ಬೆಳ್ಳುಳ್ಳಿ ದರ ಕೆಜಿಗೆ 500 ರೂ., ಹೈಬ್ರೀಡ್ ಬೆಳ್ಳುಳ್ಳಿ ದರ ಕೆಜಿಗೆ 450 ರೂ.ವರೆಗೂ ಮಾರಾಟವಾಗಿತ್ತು.
ಈಗ ದರ ಇಳಿಕೆಯಾಗಿದ್ದು, ಯಶವಂತಪುರ ಎಪಿಎಂಸಿಯಲ್ಲಿ ಕೆಜಿಗೆ 70 ರಿಂದ 150 ರೂ.ಗೆ ಇಳಿಕೆ ಕಂಡಿದೆ. ಉತ್ತಮ ಗುಣಮಟ್ಟದ ಬೆಳ್ಳುಳ್ಳಿ ಕೆಜಿಗೆ 150 ರೂ. ದರ ಇದೆ.
ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ 250 ರೂ. ದರ ಇದೆ. ಕೆಲವು ಕಡೆ ಚಿಲ್ಲರೆ ವ್ಯಾಪಾರಿಗಳು ಕೆಜಿಗೆ 300 ರೂ. ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಮಧ್ಯಪ್ರದೇಶದಲ್ಲಿ ಈಗ ಕೊಯ್ಲು ಆರಂಭವಾಗಿದೆ. ಅಲ್ಲಿಂದ ಹೆಚ್ಚಿನ ಪ್ರಮಾಣದಲ್ಲಿ ಬೆಳ್ಳುಳ್ಳಿ ಬಂದ ನಂತರ ಮುಂದಿನ ವಾರದೊಳಗೆ ಬೆಳ್ಳುಳ್ಳಿ ಸಗಟು ದರ ಕೆಜಿಗೆ 100 ರಿಂದ 120 ರೂ.ಗೆ ಇಳಿಕೆಯಾಗಲಿದೆ. ಚಿಲ್ಲರೆ ಮಾರುಕಟ್ಟೆಯಲ್ಲೂ ಧಾರಣೆ ಸ್ಥಿರವಾಗಲಿದೆ ಎಂದು ಹೇಳಲಾಗಿದೆ.