ಬೆಂಗಳೂರು: ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನಸಾಮಾನ್ಯರಿಗೆ ಗಾಯದ ಮೇಲೆ ಎಳೆದಂತೆ ಬೆಳ್ಳುಳ್ಳಿ ದರ ಮತ್ತೆ ಏರಿಕೆ ಕಂಡಿದೆ.
ಬೆಳ್ಳುಳ್ಳಿ ದರ ಕೆಜಿಗೆ 350 ರಿಂದ 400 ರೂಪಾಯಿಗೆ ಮಾರಾಟವಾಗುತ್ತಿದೆ. ಹೊರ ರಾಜ್ಯಗಳಿಂದ ಕಡಿಮೆ ಪ್ರಮಾಣದಲ್ಲಿ ಬೆಳ್ಳುಳ್ಳಿ ಪೂರೈಕೆ ಆಗುತ್ತಿರುವುದು ದರ ಹೆಚ್ಚಳಕ್ಕೆ ಕಾರಣವಾಗಿದೆ. ನವೆಂಬರ್ ವೇಳೆಗೆ ಬೆಳ್ಳುಳ್ಳಿ ದರ ಮತ್ತಷ್ಟು ಏರಿಕೆಯಾಗಲಿದ್ದು, ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಲಿದೆ.
ಕಳೆದ ಫೆಬ್ರವರಿಯಲ್ಲಿ ಬೆಳ್ಳುಳ್ಳಿ ದರ 500 ರೂ. ಸಮೀಪಿಸಿತ್ತು. ಈಗ ಚಿಲ್ಲರೆ ಮಾರುಕಟ್ಟೆಯಲ್ಲಿ ಉತ್ತಮ ದರ್ಜೆಯ ಬೆಳ್ಳುಳ್ಳಿ ದರ 360 ರಿಂದ 370 ರೂಪಾಯಿಗೆ ಮಾರಾಟವಾಗುತ್ತಿದೆ. ಕೆಲವು ಕಡೆ ಕೆಜಿಗೆ 400 ರೂಪಾಯಿಗೆ ತಲುಪಿದೆ. 15 ದಿನಗಳ ಹಿಂದೆಯಷ್ಟೇ 200 ರಿಂದ 280ರೂ. ಇದ್ದ ಬೆಳ್ಳುಳ್ಳಿ 400 ರೂಪಾಯಿಗೆ ತಲುಪಿರುವುದು ಜನಸಾಮಾನ್ಯರಿಗೆ ಹೊರೆಯಾಗಿದೆ. ಹೊರರಾಜ್ಯಗಳಿಂದ ಬೆಳ್ಳುಳ್ಳಿ ಆಮದು ಪ್ರಮಾಣದಲ್ಲಿ ಭಾರಿ ಇಳಿಕೆಯಾಗಿರುವುದರಿಂದ ದರ ಹೆಚ್ಚಳವಾಗಿದೆ ಎಂದು ಹೇಳಲಾಗಿದೆ.