ಪುದುಚೇರಿ ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ನೇತೃತ್ವದ ಕಾಂಗ್ರೆಸ್ -ಡಿಎಂಕೆ ಸರ್ಕಾರ ಸೋಮವಾರ ಪತನಗೊಂಡ ನಂತರ ಸರ್ಕಾರ ರಚಿಸುವ ಹಕ್ಕನ್ನು ಪ್ರತಿಪಾದಿಸದಿರಲು ಪ್ರತಿಪಕ್ಷ ಬಿಜೆಪಿ ನಿರ್ಧರಿಸಿದ್ದು, ಪುದುಚೇರಿಯಲ್ಲಿ ರಾಷ್ಟ್ರಪತಿ ಆಡಳಿತ ಸನ್ನಿಹಿತವಾಗಿದೆ.
ವಿಧಾನಸಭೆಯಲ್ಲಿ ವಿಶ್ವಾಸಮತ ಕಳೆದುಕೊಂಡ ನಂತರ ಸಿಎಂ ಸ್ಥಾನಕ್ಕೆ ನಾರಾಯಣಸ್ವಾಮಿ ರಾಜೀನಾಮೆ ನೀಡಿದರು. ಲೆಫ್ಟಿನೆಂಟ್ ಗವರ್ನರ್ ತಮಿಳುಸಾಯಿ ಸೌಂದರರಾಜನ್ ಅವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಪುದುಚೇರಿ ಬಿಜೆಪಿ ಅಧ್ಯಕ್ಷ ವಿ. ಸ್ವಾಮಿನಾಥನ್ ಅವರು, ನಾವು ಈ ಹಂತದಲ್ಲಿ ಸರ್ಕಾರ ರಚಿಸಲು ಪ್ರಯತ್ನಿಸುವುದಿಲ್ಲ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜನರ ಆಶೀರ್ವಾದ ಮತ್ತು ಪ್ರಧಾನಿ ಮೋದಿಯವರ ನಾಯಕತ್ವದೊಂದಿಗೆ ಬಹುಮತ ಗಳಿಸಿ ಎನ್ಡಿಎ ಸರ್ಕಾರ ರಚಿಸಲಿದೆ. ಇದು ಪುದುಚೇರಿ ಜನರಿಗೆ ಉಜ್ವಲ ಭವಿಷ್ಯವನ್ನು ದೊರಕಿಸಿಕೊಡಲಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನೇತೃತ್ವದ ಸರ್ಕಾರದ ಪತನದೊಂದಿಗೆ ಪುದುಚೇರಿಯಲ್ಲಿ ಕೆಟ್ಟ ಅಧ್ಯಾಯ ಮುಕ್ತಾಯವಾಗಿದೆ ಎಂದು ಅವರು ಟೀಕಿಸಿದ್ದಾರೆ.