ನವದೆಹಲಿ: ಪ್ರಸ್ತುತ ತೃಣಮೂಲ ಕಾಂಗ್ರೆಸ್ ಸಹ ಅಧ್ಯಕ್ಷರಾಗಿರುವ ಯಶವಂತ್ ಸಿನ್ಹಾ ಅವರನ್ನು ರಾಷ್ಟ್ರಪತಿ ಚುನಾವಣೆಯಲ್ಲಿ ಪಕ್ಷದಿಂದ ಕಣಕ್ಕಿಳಿಸುವ ಸಾಧ್ಯತೆಯಿದೆ ಎಂದು ತೃಣಮೂಲ ಕಾಂಗ್ರೆಸ್ನ ಹಿರಿಯ ನಾಯಕರೊಬ್ಬರು ಸೋಮವಾರ ಹೇಳಿದ್ದಾರೆ.
ಕಳೆದ ವರ್ಷ ಟಿಎಂಸಿಗೆ ಸೇರ್ಪಡೆಗೊಂಡ ಬಿಜೆಪಿಯ ಮಾಜಿ ನಾಯಕನ ಹೆಸರನ್ನು ಒಂದೆರಡು ವಿರೋಧ ಪಕ್ಷಗಳು ರಾಷ್ಟ್ರಪತಿ ಚುನಾವಣಾ ಅಭ್ಯರ್ಥಿಯಾಗಿ ಪ್ರಸ್ತಾಪಿಸಿವೆ. ಮತ್ತು ಬೆಂಬಲಿಸಿವೆ ಎಂದು ಹೇಳಲಾಗಿದೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ಕೆಲವು ಪಕ್ಷಗಳ ನಾಯಕರು ನೀಡಿದ ಸಲಹೆ ಮೇರೆಗೆ ಸಿನ್ಹಾ ಅವರನ್ನು ಜಂಟಿ ವಿರೋಧ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ಪಕ್ಷದ ನಾಯಕ ಹೇಳಿದ್ದಾರೆ.
ಮೊದಲು, ಎನ್.ಸಿ.ಪಿ. ಮುಖ್ಯಸ್ಥ ಶರದ್ ಪವಾರ್, ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಮತ್ತು ಪಶ್ಚಿಮ ಬಂಗಾಳದ ಮಾಜಿ ಗವರ್ನರ್ ಗೋಪಾಲ್ ಕೃಷ್ಣ ಗಾಂಧಿ ಅವರ ಹೆಸರನ್ನು ಪ್ರಸ್ತಾಪಿಸಲಾಯಿತು. ಆದರೆ, ಈ ಮೂವರೂ ರಾಷ್ಟ್ರಪತಿ ಚುನಾವಣೆಯಲ್ಲಿ ಅಭ್ಯರ್ಥಿಯಾಗಲು ನಿರಾಕರಿಸಿದರು.
ಸಿನ್ಹಾ ಈಗ ಟಿಎಂಸಿ ನಾಯಕರಾಗಿದ್ದು, ಮೂರ್ನಾಲ್ಕು ಪಕ್ಷಗಳು ಅವರ ಹೆಸರು ಪ್ರಸ್ತಾಪಿಸಿವೆ ಎಂದು ಹಿರಿಯ ಟಿಎಂಸಿ ನಾಯಕ ಹೇಳಿದ್ದಾರೆ.
ಬಿಜೆಪಿ ನೇತೃತ್ವದ ಎನ್.ಡಿ.ಎ. ವಿರುದ್ಧ ಜಂಟಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಕುರಿತು ಒಮ್ಮತ ಮೂಡಿಸಲು ಎನ್.ಸಿ.ಪಿ. ಮುಖ್ಯಸ್ಥ ಶರದ್ ಪವಾರ್ ಅವರನ್ನು ಮಂಗಳವಾರ ನವದೆಹಲಿಯಲ್ಲಿ ಭೇಟಿಯಾಗಲಿದ್ದಾರೆ. ವಿರೋಧ ಪಕ್ಷಗಳ ನಾಯಕರ ಈ ಸಭೆಯಲ್ಲಿ ಸಿನ್ಹಾ ಅವರ ಹೆಸರನ್ನು ಪರಿಶೀಲಿಸಲಾಗುವುದು. ಮಮತಾ ಬ್ಯಾನರ್ಜಿ ಕಳೆದ ವಾರ 22 ಬಿಜೆಪಿಯೇತರ ಪಕ್ಷಗಳ ಸಮಾವೇಶವನ್ನು ಆಯೋಜಿಸಿದ್ದರು. ಅದರಲ್ಲಿ 17 ಮಂದಿ ಭಾಗವಹಿಸಿದ್ದರು.
ಸಿನ್ಹಾ ಅವರು ಎರಡು ಬಾರಿ ಕೇಂದ್ರ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ್ದರು. ಒಮ್ಮೆ ಚಂದ್ರಶೇಖರ್ ಸಂಪುಟದಲ್ಲಿ ಮತ್ತು ಮತ್ತೊಮ್ಮೆ ವಾಜಪೇಯಿ ಮಂತ್ರಿಮಂಡಲದಲ್ಲಿ ಹಣಕಾಸು ಸಚಿವರಾಗಿದ್ದರು. ವಾಜಪೇಯಿ ಸಂಪುಟದಲ್ಲಿ ವಿದೇಶಾಂಗ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.
ರಾಷ್ಟ್ರಪತಿ ಚುನಾವಣೆಗೆ ಜುಲೈ 18 ರಂದು ಮತದಾನ ಆರಂಭವಾಗಲಿದ್ದು, ಜುಲೈ 21 ರಂದು ಫಲಿತಾಂಶ ಪ್ರಕಟವಾಗಲಿದೆ.