ನವದೆಹಲಿ: ಭಾರತದ 15 ನೇ ರಾಷ್ಟ್ರಪತಿಯಾಗಿ ಎನ್.ಡಿ.ಎ. ಅಭ್ಯರ್ಥಿ ದ್ರೌಪದಿ ಮುರ್ಮು ಆಯ್ಕೆಯಾಗಿದ್ದಾರೆ. ಅವರು ರಾಷ್ಟ್ರಪತಿ ಹುದ್ದೆಗೇರಿದ ಪ್ರಥಮ ಆದಿವಾಸಿ ಮಹಿಳೆಯಾಗಿದ್ದಾರೆ
ರಾಷ್ಟ್ರಪತಿ ಚುನಾವಣೆಯಲ್ಲಿ ವಿಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾ ಸೋಲು ಕಂಡಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಧಿಕಾರಾವಧಿ ಜುಲೈ 24 ರಂದು ಕೊನೆಗೊಳ್ಳುತ್ತಿದೆ. ಜುಲೈ 25 ರಂದು ಹೊಸ ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ರಾಷ್ಟ್ರಪತಿ ಚುನಾವಣೆಗೆ ಸೋಮವಾರ ಬೆಳಿಗ್ಗೆ 10 ರಿಂದ ಸಂಜೆ 5 ರ ನಡುವೆ ಸಂಸತ್ ಭವನ ಮತ್ತು ರಾಜ್ಯ ವಿಧಾನಸಭೆಗಳ ವ್ಯಾಪ್ತಿಯ 30 ಕೇಂದ್ರಗಳು ಸೇರಿದಂತೆ 31 ಸ್ಥಳಗಳಲ್ಲಿ ಮತದಾನ ನಡೆಯಿತು. ಹಲವಾರು ರಾಜ್ಯಗಳಲ್ಲಿ ಮುರ್ಮು ಪರವಾಗಿ ಅಡ್ಡ ಮತದಾನವೂ ನಡೆದಿತ್ತು.
ದರ್ಔಪದಿ ಮುರ್ಮು ಅವರು ಪಡೆದ ಮತಗಳ ಮೌಲ್ಯ 5,77,777 ಆಗಿದ್ದು(5121 ಮತಗಳು), ಯಶವಂತ ಸಿನ್ಹಾ ಅವರ ಮತಗಳ ಮೌಲ್ಯ 2,61,062(1058 ಮತಗಳು) ಆಗಿದೆ. ದ್ರೌಪದಿ ಮುರ್ಮು 15 ನೇ ರಾಷ್ಟ್ರಪತಿಯಾಗಿದ್ದು, ದೇಶದ ಉನ್ನತ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿದ ಮೊದಲ ಬುಡಕಟ್ಟು ಮಹಿಳೆಯಾಗಿದ್ದಾರೆ. ದೆಹಲಿ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸಂಭ್ರಮಾಚರಣೆ ನಡೆಸಿ ದ್ರೌಪದಿ ಮುರ್ಮು ಅವರನ್ನು ಅಭಿನಂದಿಸಲಾಗಿದೆ.