ಪಾಟ್ನಾ: ಬಿಹಾರದ ಕತಿಹಾರ್ ಜಿಲ್ಲೆಯ ಹುಡುಗಿಯೊಬ್ಬಳು ಬೋರ್ಡ್ ಪರೀಕ್ಷೆ ಬರೆಯಲು ಹೋಗಿ ಮದುವೆಯಾಗಿ ಮನೆಗೆ ಮರಳಿದ್ದಾಳೆ. ಬೆಳಗ್ಗೆ ಮನೆಯಿಂದ ಪರೀಕ್ಷೆ ಬರೆಯಲು ಹೋಗಿದ್ದ ವಿದ್ಯಾರ್ಥಿನಿ ಪರೀಕ್ಷೆಗೆ ಹಾಜರಾಗದೆ ಪ್ರೇಮಿಯನ್ನು ಮದುವೆಯಾಗಿ ಮರಳಿ ಮನೆಗೆ ಮರಳಿದ್ದಾಳೆ.
ಬಿಹಾರ್ ಕತಿಹಾರ್ ಜಿಲ್ಲೆಯ ಮಣಿಹಾರಿ ಪ್ರದೇಶದಲ್ಲಿ ಘಟನೆ ನಡೆದಿದೆ. 10ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ ಮೆಟ್ರಿಕ್ಯುಲೇಷನ್ ಪರೀಕ್ಷೆಗೆ ಹೋಗಿದ್ದಳು. ಆದರೆ, ಪರೀಕ್ಷೆ ಬರೆಯುವ ಬದಲು ಪರೀಕ್ಷಾ ಕೇಂದ್ರದ ಹೊರಗೆ ತನಗಾಗಿ ಕಾಯುತ್ತಿದ್ದ ಪ್ರಿಯಕರನನ್ನು ಮದುವೆಯಾಗಿದ್ದಾಳೆ.
2016ರಲ್ಲಿ ಮಿಸ್ಡ್ ಕಾಲ್ ಮೂಲಕ ಇಬ್ಬರ ನಡುವೆ ಗೆಳೆತನವಾಗಿದೆ. ಬಳಿಕ ಅವರು ಪ್ರೀತಿಸಿದ್ದರು. ಕುಟುಂಬ ಸದಸ್ಯರು ಅವರ ಸಂಬಂಧ ಒಪ್ಪಿಕೊಂಡಿರಲಿಲ್ಲ. ಮದುವೆ ವಿಚಾರದಲ್ಲಿ ಹುಡುಗಿಯ ಶಿಕ್ಷಣ ಹಾಳಾಗಿದೆ. ಆದರೆ, ಆಕೆ ಪ್ರೀತಿ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದು, ಮುಂದಿನ ವರ್ಷ ಪರೀಕ್ಷೆ ಬರೆಯುವುದಾಗಿ ಹೇಳಿದ್ದಾಳೆ.
ದೇವಾಲಯದಲ್ಲಿ ಮದುವೆಯಾದ ಬಳಿಕ ಪೊಲೀಸರನ್ನು ಭೇಟಿಯಾದ ಹುಡುಗ-ಹುಡುಗಿ ನೆರವು ಯಾಚಿಸಿದ್ದಾರೆ. ತಮ್ಮ ಮನೆಯವರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದಾರೆ. ಆದರೆ ಪೋಷಕರು ಒಪ್ಪಿಲ್ಲವೆಂದು ಮಣಿಹಾರಿ ಉಪವಿಭಾಗದ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.