ಕೊರೊನಾ ವೈರಸ್ ಎರಡನೇ ಅಲೆ ಗರ್ಭಿಣಿ ಹಾಗೂ ಬಾಣಂತಿಯರ ಮೇಲೆ ಹೆಚ್ಚು ಪ್ರಭಾವ ಬೀರಿದೆ. ಮೊದಲ ಅಲೆಗೆ ಹೋಲಿಕೆ ಮಾಡಿದ್ರೆ ಎರಡನೇ ಅಲೆಯಲ್ಲಿ ಇವರು ಹೆಚ್ಚು ಪ್ರಭಾವಕ್ಕೊಳಗಾಗಿದ್ದಾರೆ. ಸಾವಿನ ಪ್ರಮಾಣವೂ ಹೆಚ್ಚಿದೆ ಎಂದು ಐಸಿಎಂಆರ್ ನಡೆಸಿದ ಅಧ್ಯಯನದಲ್ಲಿ ಬಹಿರಂಗವಾಗಿದೆ. ಗರ್ಭಿಣಿಯರು ಅವಶ್ಯಕವಾಗಿ ಲಸಿಕೆ ಪಡೆಯಬೇಕೆಂದು ಐಸಿಎಂಆರ್ ಸೂಚಿಸಿದೆ.
ಎರಡನೇ ಅಲೆಯಲ್ಲಿ ರೋಗಲಕ್ಷಣದ ಸೋಂಕಿನ ಪ್ರಕರಣಗಳು ಶೇಕಡಾ 28.7ರಷ್ಟಿದೆ. ಮೊದಲ ಅಲೆಯಲ್ಲಿ ಈ ಸಂಖ್ಯೆ ಶೇಕಡಾ 14.2 ರಷ್ಟಿತ್ತು ಎಂದು ಐಸಿಎಂಆರ್ ಹೇಳಿದೆ. ಗರ್ಭಿಣಿಯರು ಮತ್ತು ಬಾಣಂತಿಯರ ಮರಣ ಪ್ರಮಾಣವು ಶೇಕಡಾ 5.7 ರಷ್ಟಿತ್ತು. ಮೊದಲ ಅಲೆಯಲ್ಲಿ ಮರಣ ಪ್ರಮಾಣ ಶೇಕಡಾ 0.7 ಕ್ಕಿಂತ ಹೆಚ್ಚಾಗಿತ್ತು.
ಕೊರೊನಾ ಎರಡನೇ ಅಲೆಯಲ್ಲಿ ಸಾವನ್ನಪ್ಪಿದವರ ಪೈಕಿ ಶೇಕಡಾ 2ರಷ್ಟು ಮಂದಿ ಕೆಲ ದಿನಗಳ ಹಿಂದಷ್ಟೆ ಮಗುವಿಗೆ ಜನ್ಮ ನೀಡಿದ ಮಹಿಳೆಯರು ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ನ್ಯುಮೋನಿಯಾ ಮತ್ತು ಉಸಿರಾಟ ತೊಂದರೆಗಳಿಗೆ ತುತ್ತಾಗಿ ಸಾವನ್ನಪ್ಪಿದ್ದರು. ಗರ್ಭಿಣಿಯರು ಹಾಗೂ ಹಾಲುಣಿಸುವ ಮಹಿಳೆಯರಿಗೆ ಅಗತ್ಯವಾಗಿ ಲಸಿಕೆ ನೀಡಬೇಕೆಂದು ಐಸಿಎಂಆರ್ ಅಧ್ಯಯನದಲ್ಲಿ ತಿಳಿಸಿದೆ.
ಆದ್ರೆ ಗರ್ಭಿಣಿಯರಿಗೆ ಲಸಿಕೆ ಹಾಕುವ ಬಗ್ಗೆ ಇನ್ನೂ ಸರ್ಕಾರದಿಂದ ಅನುಮತಿ ಸಿಕ್ಕಿಲ್ಲ. ಗರ್ಭಿಣಿಯರಿಗೆ ಕೋವಿಡ್ನ ಹೆಚ್ಚಿನ ಅಪಾಯವಿದ್ದರೆ ಮತ್ತು ಅವರಿಗೆ ಇತರ ಕಾಯಿಲೆಗಳಿದ್ದರೆ ಲಸಿಕೆ ಹಾಕಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿದೆ.