ಗರ್ಭಾವಸ್ಥೆಯು ಒಂದು ರೋಗ ಅಥವಾ ಅಂಗವೈಕಲ್ಯವಲ್ಲ ಮತ್ತು ಮಹಿಳೆಯರಿಗೆ ಸರ್ಕಾರಿ ಉದ್ಯೋಗಗಳನ್ನು ನಿರಾಕರಿಸಲು ಇದನ್ನು ಬಳಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಗರ್ಭಿಣಿಯೊಬ್ಬರು ಕಾನ್‌ಸ್ಟೆಬಲ್ ಹುದ್ದೆಗೆ ತನ್ನ ದೈಹಿಕ ದಕ್ಷತೆ ಪರೀಕ್ಷೆಯನ್ನು (ಪಿಇಟಿ) ಮುಂದೂಡುವಂತೆ ಮನವಿ ಮಾಡಿದ್ದರು. ಗರ್ಭಾವಸ್ಥೆಯಲ್ಲಿ ಎತ್ತರ ಜಿಗಿತ, ಲಾಂಗ್ ಜಂಪ್ ಮತ್ತು ಓಟದಂತಹ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ ಎಂದು ಆರ್‌ಪಿಎಫ್‌ಗೆ ತಿಳಿಸಿದ್ದರು. ಆದ್ರೆ ಮಹಿಳೆ ವಿನಂತಿಯನ್ನು ಪುರಸ್ಕರಿಸುವ ಬದಲು, ಆರ್ ಪಿಎಫ್ ಅನರ್ಹಗೊಳಿಸುವ ಅಂಶವನ್ನು ಪರಿಗಣಿಸಿತ್ತು.
ಇದನ್ನು ಪ್ರಶ್ನಿಸಿ ಮಹಿಳೆ ಕೋರ್ಟ್ ಮೊರೆ ಹೋಗಿದ್ದಳು. ಆದ್ರೆ ಐದು ವರ್ಷಗಳ ನಂತ್ರ ನ್ಯಾಯಾಲಯ ಈ ಬಗ್ಗೆ ತೀರ್ಪು ನೀಡಿದೆ. ನ್ಯಾಯಮೂರ್ತಿಗಳಾದ ರೇಖಾ ಪಲ್ಲಿ ಮತ್ತು ಶಾಲಿಂದರ್ ಕೌರ್, ಆರ್‌ಪಿಎಫ್ ಮತ್ತು ಕೇಂದ್ರ ಸರ್ಕಾರ ಪ್ರಕರಣವನ್ನು ನಿರ್ವಹಿಸಿದ ರೀತಿಗೆ ಅತೃಪ್ತಿ ವ್ಯಕ್ತಪಡಿಸಿದೆ. ಮಹಿಳೆಯರಿಗೆ ಸಾರ್ವಜನಿಕ ಉದ್ಯೋಗಾವಕಾಶಗಳನ್ನು ನಿರಾಕರಿಸಲು ತಾಯ್ತನವು ಎಂದಿಗೂ ಆಧಾರವಾಗಬಾರದು ಎಂದಿದೆ.
ಮಹಿಳೆಯ ಪರೀಕ್ಷೆ ಮತ್ತು ದಾಖಲೆ ಪರಿಶೀಲನೆಯನ್ನು ಆರು ವಾರಗಳಲ್ಲಿ ನಡೆಸುವಂತೆ ನ್ಯಾಯಾಲಯವು ಆರ್‌ಪಿಎಫ್‌ಗೆ ನಿರ್ದೇಶನ ನೀಡಿದೆ. ಅವರು ಅರ್ಹತಾ ಮಾನದಂಡಗಳನ್ನು ಪೂರೈಸಿದರೆ, ಹಿಂದಿನ ಹಿರಿತನ ಮತ್ತು ಇತರ ಪ್ರಯೋಜನಗಳೊಂದಿಗೆ ಕಾನ್‌ಸ್ಟೆಬಲ್ ಹುದ್ದೆಗೆ ನಾಮನಿರ್ದೇಶನ ಮಾಡಬೇಕೆಂದು ಸೂಚಿಸಿದೆ.