ಬೆಂಗಳೂರು: ಓವರ್ ಡೋಸ್ ಇಂಜಕ್ಷನ್ ನಿಂದಾಗಿ ಗರ್ಭಿಣಿಯೊಬ್ಬರಿಗೆ ಅಬಾರ್ಷನ್ ಆಗಿದ್ದು, ಕುಟುಂಬದವರು ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆಯಲ್ಲಿ ಈ ದುರಂತ ಸಂಭವಿಸಿದೆ. 6 ತಿಂಗಳ ಗರ್ಭಿಣಿಗೆ ಅಬಾರ್ಷನ್ ಆಗಿದ್ದು, ಓವರ್ ಡೋಸ್ ಪೇನ್ ಕಿಲ್ಲರ್ ಇಂಜಕ್ಷನ್ ನಿಂದ ದುರಂತ ಸಂಭವಿಸಿದೆ ಎಂದು ಕುಟುಂಬದವರು ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಮಹಿಳೆಯ ಪತಿ ಹೇಳುವ ಪ್ರಕಾರ ಪ್ರತಿ ತಿಂಗಳು ಟೆಸ್ಟಿಂಗ್ ಗೆ ಆಸ್ಪತ್ರೆಗೆ ಬರುತ್ತಿದ್ದೆವು. ಅದೇ ರೀತಿ ಈಗಲೂ ಬಂದಿದ್ದೆವು. ಈ ವೇಳೆ ಪತ್ನಿಗೆ ಹೊಟ್ಟೆನೋವು ಕಾಣಿಸಿಕೊಂಡಿದೆ. ಈ ವೇಳೆ ವೈದ್ಯರು ಇಂಜಕ್ಷನ್ ಕೊಟ್ಟಿದ್ದರು. ಕೆಲ ಸಮಯದಲ್ಲೇ ಇಂಜಕ್ಷನ್ ಕೊಟ್ಟ ಜಾಗದಲ್ಲಿ ಊದಿಕೊಳ್ಳಲಾರಂಭಿಸಿದೆ. ನನ್ನ ಪತ್ನಿಗೆ ಎದ್ದು ಓಡಾಡಲು ಆಗುತ್ತಿರಲಿಲ್ಲ. ಈ ವೇಳೆ ಊತ, ನೋವು ಕಡಿಮೆಯಾಗಲಿ ಎಂದು ಹಲವು ಪೇನ್ ಕಿಲ್ಲರ್ ಇಂಜಕ್ಷನ್ ಕೊಟ್ಟಿದ್ದಾರೆ. ಹೋಟ್ಟೆನೋವು ಇನ್ನಷ್ಟು ಜಾಸ್ತಿಯಾಗಿದೆ. ಆಸ್ಪತ್ರೆಯಲ್ಲಿ ಮತ್ತೆ ವಿಚಾರಿಸಿದಾಗ ಮಗು ಉಳಿಯಲ್ಲ ಅಬಾರ್ಷನ್ ಮಾಡಬೇಕು ಎಂದಿದ್ದಾರೆ. ವೈದ್ಯರು ಈಗ ಅಬಾರ್ಷನ್ ಮಾಡಿದ್ದಾರೆ. ಆಸ್ಪತ್ರೆ ಸಿಬ್ಬಂದಿಗಳು ಹಾಗೂ ವೈದ್ಯರ ನಿರ್ಲಕ್ಷ್ಯದಿಂದಾಗಿ ಈ ಸ್ಥಿತಿ ಬಂದಿದೆ ಎಂದು ಕಣ್ಣೀರಿಟ್ಟಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಕುಟುಂಬದವರು ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ.