ಉತ್ತರ ಪ್ರದೇಶದ ಮಿರ್ಜಾಪುರದ ಆಸ್ಪತ್ರೆಯೊಂದರಲ್ಲಿ ಗರ್ಭಿಣಿಯ ಮೇಲೆ ಅತ್ಯಾಚಾರ ನಡೆಸಿರುವ ಆರೋಪ ಕೇಳಿಬಂದಿದೆ. ಶೌಚಾಲಯ ಸ್ವಚ್ಛಗೊಳಿಸುವ ಸಿಬ್ಬಂದಿಯೊಬ್ಬ ಈ ಕೃತ್ಯ ನಡೆಸಿದ್ದಾನೆ. ಮಹಿಳೆ ಶೌಚಾಲಯಕ್ಕೆ ಹೋದ ಸಂದರ್ಭದಲ್ಲಿ ಹಿಂಬಾಲಿಸಿದ ವ್ಯಕ್ತಿ ಆಕೆಯ ಮೇಲೆ ಬಲಾತ್ಕಾರ ಮಾಡಿದ್ದಾನೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.
ಮೇ 7 ರ ರಾತ್ರಿ ಮಿರ್ಜಾಪುರದ ವಿಭಾಗೀಯ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಮೂರು ತಿಂಗಳ ಗರ್ಭಿಣಿಯಾದ ಆ ಮಹಿಳೆಯನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂದು ರಾತ್ರಿ 9 ರಿಂದ 10 ರ ಸುಮಾರಿಗೆ ಮಹಿಳೆಯು ತಾನು ದಾಖಲಾಗಿದ್ದ ವಾರ್ಡ್ ನ ವಾಶ್ ರೂಂಗೆ ಹೋದ ಸಂದರ್ಭದಲ್ಲಿ ವ್ಯಕ್ತಿಯು ಶೌಚಾಲಯವನ್ನು ಸ್ವಚ್ಛ ಮಾಡುತ್ತಿದ್ದ.
ಶೌಚಾಲಯಕ್ಕೆ ಹೋದ ತಕ್ಷಣ ಆ ವ್ಯಕ್ತಿ ಮಹಿಳೆಯ ಬಟ್ಟೆಯನ್ನು ಕಿತ್ತೆಸೆದು, ಈಗ ನಿನ್ನ ಮೈಮೇಲೆ ಬಟ್ಟೆ ಇಲ್ಲ, ಎಲ್ಲಿಗೂ ಹೋಗಲು ಸಾಧ್ಯವಿಲ್ಲ ಎಂದು ಹೇಳುತ್ತಾ ವಿಕೃತವಾಗಿ ವರ್ತಿಸಿದ್ದಾನೆ. ಇದಾದ ಬಳಿಕ ಏನೂ ಮಾತಾಡದಂತೆ ಎಚ್ಚರಿಕೆ ನೀಡಿ ಅತ್ಯಾಚಾರ ಎಸಗಿದ ಎಂದು ಮಹಿಳೆ ದೂರು ನೀಡಿದ್ದಾಳೆ.
ಅವನ ದುರ್ವರ್ತನೆಯಿಂದ ಆತಂಕಕ್ಕೆ ಒಳಗಾದ ಮಹಿಳೆ ಕೂಗಿಕೊಂಡಿದ್ದಾಳೆ. ಇದನ್ನು ಕೇಳಿ ವಾರ್ಡ್ ನಲ್ಲಿದ್ದ ಮಹಿಳೆಯೊಬ್ಬರು ಶೌಚಾಲಯದ ಬಳಿ ಬರುವಷ್ಟರಲ್ಲಿ ದುರುಳ ಪರಾರಿಯಾಗಿದ್ದಾನೆ.