ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಝೇಲಂ ನಗರದಲ್ಲಿ ಗರ್ಭಿಣಿ ಮೇಲೆ ಐವರು ಪುರುಷರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಪೊಲೀಸರ ಪ್ರಕಾರ, ಐವರು ಆರೋಪಿಗಳು ಮಹಿಳೆಯ ಮನೆಗೆ ನುಗ್ಗಿದ್ದಾರೆ. ಮಗುವಿನ ನಿರೀಕ್ಷೆಯಲ್ಲಿದ್ದ ಸಂತ್ರಸ್ತೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವ ಮೊದಲು ಅವರು ಮೊದಲು ಆಕೆಯ ಪತಿಯನ್ನು ಕಟ್ಟಿಹಾಕಿದ್ದಾರೆ.
ಹಲ್ಲೆಯ ನಂತರ ಮಹಿಳೆ ಸ್ವತಃ ಆಸ್ಪತ್ರೆಗೆ ಹೋಗಿದ್ದಳು. ಸಂತ್ರಸ್ತೆ ತನಗಾದ ಕಷ್ಟವನ್ನು ವಿವರಿಸಿದ ನಂತರ ಆಸ್ಪತ್ರೆಯ ಸಿಬ್ಬಂದಿ ಪೊಲೀಸರಿಗೆ ಘಟನೆಯನ್ನು ತಿಳಿಸಿದ್ದಾರೆ.
ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಆಕೆಯ ರಕ್ತದ ಮಾದರಿಗಳನ್ನು ಫೋರೆನ್ಸಿಕ್ ಪರೀಕ್ಷೆಗಾಗಿ ಲಾಹೋರ್ ಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಂಜಾಬ್ ಪೊಲೀಸರು ಪ್ರಕರಣದ ತನಿಖೆಗೆ ವಿಶೇಷ ತಂಡಗಳನ್ನು ರಚಿಸಿ ಅಪರಾಧಿಗಳ ಪತ್ತೆಗೆ ಶೋಧ ಆರಂಭಿಸಿದ್ದಾರೆ. ಈ ಘಟನೆಯು ಪಾಕಿಸ್ತಾನವನ್ನು ಬೆಚ್ಚಿಬೀಳಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ತಿಂಗಳು ಕರಾಚಿಯಲ್ಲಿ ಚಲಿಸುವ ರೈಲಿನಲ್ಲಿ 25 ವರ್ಷದ ಮಹಿಳೆಯೊಬ್ಬರು ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದರು.
ಪಂಜಾಬ್ ಮಾಹಿತಿ ಆಯೋಗ ಫೆಬ್ರವರಿಯಲ್ಲಿ ಒದಗಿಸಿದ ದತ್ತಾಂಶದ ಪ್ರಕಾರ, ಪ್ರಾಂತ್ಯದಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ ಒಟ್ಟು 2,439 ಮಹಿಳೆಯರ ಮೇಲೆ ಕುಟುಂಬ ಗೌರವದ ಹೆಸರಿನಲ್ಲಿ ಅತ್ಯಾಚಾರ, ದೌರ್ಜನ್ಯ ಎಸಗಿದ್ದು. 90 ಮಂದಿಯನ್ನು ಕೊಲ್ಲಲಾಗಿದೆ.
ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗದ(HRCP) ಇತ್ತೀಚಿನ ವರದಿಯ ಪ್ರಕಾರ, ದೇಶದಲ್ಲಿ ಪ್ರತಿದಿನ ಕನಿಷ್ಠ 11 ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿವೆ, ಕಳೆದ ಆರು ವರ್ಷಗಳಲ್ಲಿ(2015-21) 22,000 ಕ್ಕೂ ಹೆಚ್ಚು ಘಟನೆಗಳು ಪೊಲೀಸರಿಗೆ ವರದಿಯಾಗಿವೆ.